(bus incident) ಇದೇ ಬಸ್‌ನಿಂದ ಜಿಗಿದುರುವ ವ್ಯಕ್ತಿ. 
ಧಾರವಾಡ

(bus incident) ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಸತ್ನಾ?

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಹೆದ್ದಾರಿ 48ರ ಗಬ್ಬೂರು ಕ್ರಾಸ್ ಹಾಗೂ ರಿಂಗ್ ರೋಡ್ ನಡುವೆ ಘಟನೆ
  • ಪುತ್ತೂರು ವಿಭಾಗ ಧರ್ಮಸ್ಥಳ ಘಟಕಕ್ಕೆ ಸೇರಿದ ಮಾದರಿಯ ವೇಗದೂತ ಬಸ್ಸು
ಹುಬ್ಬಳ್ಳಿ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿನಿಂದ ಜಿಗಿದು (bus incident) ಹಿಂದಿನಿಂದ ಬಂದ ಕಾರ್ ಡಿಕ್ಕಿಯಾಗಿ ಅನಾಮಧೇಯ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 48ರ ಗಬ್ಬೂರು ಕ್ರಾಸ್ ಹಾಗೂ ರಿಂಗ್ ರೋಡ್ ನಡುವೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಕೆಎಸ್‌ಅರ್‌ಟಿಸಿ ಪುತ್ತೂರು ವಿಭಾಗ ಧರ್ಮಸ್ಥಳ ಘಟಕಕ್ಕೆ ಸೇರಿದ ಮಾದರಿಯ ವೇಗದೂತ ಬಸ್ಸು ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗುತ್ತಿತ್ತು. ಗಬ್ಬೂರ ಕ್ರಾಸ್ ಮತ್ತು ಕುಂದಗೋಳ ಕ್ರಾಸ್ ನಡುವೆ ರಾತ್ರಿ 8.30ರ ವೇಳೆ ಚಲಿಸುತ್ತಿದ್ದ ಬಸ್ಸಿನಿಂದ ಪ್ರಯಾಣಿಕರೊಬ್ಬರು ಏಕಾಏಕಿ ಬಸ್ಸಿನ ಹಿಂದಿನ ಬಾಗಿಲು ತೆರೆದು ರಸ್ತೆಗೆ ಜಿಗಿದಿದ್ದಾರೆ. ಅದೇ ಸಮಯಕ್ಕೆ ಹಿಂದಿನಿಂದ ಬಂದ ಸ್ಕಾರ್ಪಿಯೋ ಕಾರ್ ಡಿಕ್ಕಿಯಾಗಿ, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಿಂದ ಜಿಗಿದ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿರಬಹುದು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯಯದಿಂದ ಪಾರಾಗಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅವರು, ಇಂಜಿನಿಯರ್ ದೀಪಕ ಜಾಧವ, ವೈ.ಎಂ. ಶಿವರಡ್ಡಿ, ಡಿಪೋ ಮ್ಯಾನೇಜರ್ ವಿನೋದ ಅಮ್ಮಣಗಿ ಹಾಗೂ ನಿಲ್ದಾಣಾಧಿಕಾರಿ ಯು.ಎಸ್. ಇನಾಮತಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪ್ರಯಾಣ ಮುಂದುವರೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿದರು.
ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ. ಅಪಘಾತ ಸಂಭವಿಸಿದ ವೇಳೆ ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ವಿತರಿಸುವುದರಲ್ಲಿ ಮಗ್ನವಾಗಿದ್ದರು. ಮೃತ ವ್ಯಕ್ತಿ ಹುಬ್ಬಳ್ಳಿಯಿಂದ ಸುರತ್ಕಲ್ಗೆ ಟಿಕೆಟ್ ಪಡೆದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಮಟ್ಟದ ತನಿಖೆ ಮುಂದುವರಿದಿದೆ ಎಂದು ಎಚ್. ರಾಮನಗೌಡರ ತಿಳಿಸಿದ್ದಾರೆ.