ಧಾರವಾಡ: ಗ್ಯಾಸ್ ಸಿಲಿಂಡರ್ ಅಭಾವದ ಬೆನ್ನಲ್ಲೇ ನಗರದಲ್ಲಿ ಆಟೋ ಎಲ್ಪಿಜಿ ಅಭಾವ ಉಂಟಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದಿಂದ ಇಲ್ಲಿನ ಅನೇಕ ಹೋಟೆಲ್ಗಳು ಬಂದ್ ಆಗಿವೆ. ಇದೀಗ ಆಟೋ ಎಲ್ಪಿಜಿ ಸಿಗದೆ ಘಟಕಗಳನ್ನು ಬಂದ್ ಮಾಡಲಾಗಿದೆ.
ನಗರದ ಹೊಸಯಲ್ಲಾಪುರ ಮುಖ್ಯ ರಸ್ತೆಯ ಸೂಪರ್ ಗ್ಯಾಸ್ ಘಟಕವನ್ನು ಬಂದ್ ಮಾಡಿ "ನೋ ಸ್ಟಾಕ್ ಫಲಕ' ಹಾಕಲಾಗಿದೆ. ಅದೇರೀತಿ ಓಲ್ಡ್ ಎಸ್ಪಿ ಸರ್ಕಲ್ನ ಘಟಕವೂ ಬಂದ್ ಆಗಿದೆ. ಇದರಿಂದ ಆಟೋ ಚಾಲಕರು ಪರದಾಡುವಂತಾಗಿದೆ.
ಮೈತ್ರಿ ಪ್ಯಾಲೇಸ್ ಎದುರಿನ ರಿಲಯನ್ಸ್ ಬಂಕ್ನಲ್ಲಿ ಎಲ್ಪಿಜಿ ಲಭ್ಯವಿದೆ. ಆದರೆ, ಎಲ್ಪಿಜಿ ಬರಿಸಿಕೊಳ್ಳಲು ಗಂಟೆಗಟ್ಟಲೇ ವಾಹನಗಳು ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಇನ್ನು ಲಭ್ಯವಿರುವ ಎಲ್ಪಿಜಿ ಗ್ಯಾಸ್ ಬಂಕ್ಗಳಲ್ಲಿ ಒಂದೊಂದೆಡೆ ಒಂದೊಂದು ದರ ನಿಗದಿಪಡಿಸಲಾಗಿದೆ ಎಂದು ಆಟೋ ಚಾಲಕರು ಅಲವತ್ತುಕೊಂಡಿದ್ದಾರೆ.