ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಉಪನ್ಯಾಸ ನೀಡಿದ ಕಮಲ್​ ಬಾಲಿ ಅವರನ್ನು ಸನ್ಮಾನಿಸಲಾಯಿತು. ಸಂದೀಪ ಬಿಡಸಾರಿಯಾ, ಗೌತಮ ಓಸ್ತವಾಲ, ಸಿದ್ದಲಿಂಗೇಶ್ವರ ಕೊಟ್ಟೂರಶೆಟ್ಟರ, ಪ್ರವಿಣ ಅಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಉದಯ ರೇವಣಕರ, ಪ್ರಕಾಶ ಶೃಂಗೇರಿ ಇತರರು ಇದ್ದರು. 
ಧಾರವಾಡ

ಬಿಲ್ಡಿಂಗ್​ ಸ್ಟ್ರಾಂಗ್​ ಬಿಜಿನೆಸ್​ ಉಪನ್ಯಾಸ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಆಯೋಜನೆ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳಿಗಾಗಿ ಲೀಡರ್​ಶಿಪ್​ ಇನ್​ ಟರ್ಬುಲೆಂಟ್ ಟೈಮ್ಸ್​- ಬಿಲ್ಡಿಂಗ್​ ಸ್ಟ್ರಾಂಗ್​ ಬಿಜಿನೆಸ್​ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು.

ಮುಖ್ಯ ಭಾಷಣಕಾರರಾಗಿದ್ದ ವೋಲ್ವೋ ಗ್ರುಪ್​ ಇಂಡಿಯಾದ ಎಂಡಿ ಕಮಲ್​ ಬಾಲಿ, ಇಂದಿನ ಜಾಗತಿಕ ಆರ್ಥಿಕ ಪರಿಸ್ಥಿತಿ, ತ್ವರಿತವಾಗಿ ಬದಲಾಗುತ್ತಿರುವ ಉದ್ಯಮ ವಾತಾವರಣ, ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಹಾಗೂ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಸವಾಲುಗಳ ನಡುವೆ ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಕುರಿತು ಅನುಭವ ಮತ್ತು ವಿಚಾರಗಳನ್ನು ಹಂಚಿಕೊಂಡರು.

ಇಂದಿನ ಅನಿಶ್ಚಿತತೆ ಮತ್ತು ಸವಾಲುಗಳ ಕಾಲದಲ್ಲಿ ಉದ್ಯಮದ ಯಶಸ್ಸಿಗೆ ಕೇವಲ ಆರ್ಥಿಕ ಸಂಪನ್ಮೂಲಗಳು ಅಥವಾ ತಾಂತ್ರಿಕ ಸಾಮರ್ಥ್ಯ ಸಾಕಾಗುವುದಿಲ್ಲ. ದೂರದೃಷ್ಟಿಯ ನಾಯಕತ್ವ, ಸ್ಪಷ್ಟವಾದ ಗುರಿ, ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನೋಭಾವ ಹಾಗೂ ತಂಡದ ಒಗ್ಗಟ್ಟು ಅತ್ಯಂತ ಮುಖ್ಯ ಎಂದು ತಿಳಿಸಿದರು.

ಬಲಿಷ್ಠ ಉದ್ಯಮ ಸ್ಥಾಪಿಸಲು ಗ್ರಾಹಕರ ವಿಶ್ವಾಸ, ಗುಣಮಟ್ಟ, ನಾವೀನ್ಯತೆ, ಉತ್ಪಾದಕತೆ ಮತ್ತು ನಿರಂತರ ಸುಧಾರಣೆಗೆ ಆದ್ಯತೆ ನೀಡಬೇಕು. ಉದ್ಯಮಿಗಳು ಅಲ್ಪಾವಧಿಯ ಲಾಭಕ್ಕೆ ಸೀಮಿತವಾಗದೆ ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕೆಸಿಸಿಐ ಅಧ್ಯಕ್ಷ ಸಂದೀಪ ಬಿಡಸಾರಿಯಾ ಮಾತನಾಡಿ, ಬದಲಾಗುತ್ತಿರುವ ಆರ್ಥಿಕ ಮತ್ತು ವ್ಯಾವಹಾರಿಕ ಪರಿಸ್ಥಿತಿಯಲ್ಲಿ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳು, ಪರಿಣಾಮಕಾರಿ ನಾಯಕತ್ವದ ಮಹತ್ವದ ಬಗ್ಗೆ ವಿವರಿಸಿದರು.

ಸಂಸ್ಥೆಯ ಕಾರ್ಯಕ್ರಮ ಸಮಿತಿ ಚೇರ್ಮನ್​ ಗೌತಮ ಓಸ್ತವಾಲ ಅವರು ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಸಿದ್ದಲಿಂಗೇಶ್ವರ ಕೊಟ್ಟೂರಶೆಟ್ಟರ ಅತಿಥಿಗಳನ್ನು ಪರಿಚಯಿಸಿದರು.

ಉಪಾಧ್ಯಕ್ಷರಾದ ಪ್ರವಿಣ ಅಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಜೊತೆ ಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ, ಸದಸ್ಯರಾದ ವಿಕ್ರಮ ಸಿರೂರ, ಸುಹಾಸ ಜವಳಿ, ವಿಜಯಕುಮಾರ ಗುಡ್ಡದ, ಸಿ.ಜಿ. ಧಾರವಾಡಶೆಟ್ಟರ, ಸುಭಾಸ ಬಾಗಲಕೋಟಿ, ಸದಾನಂದ ಕಾಮತ, ವೀರಣ್ಣ ಸಜ್ಜನ, ವಿಶ್ವನಾಥ ಹಿರೇಗೌಡರ, ರವಿ ಬಳಿಗಾರ ಮುಂತಾದವರು ಉಪಸ್ಥಿತರಿದ್ದರು.