ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಲ್ಡ್​ ಟೆಕ್​ ಎಕ್ಸಪೋ ಕುರಿತು ಮಾಹಿತಿ ನೀಡಿದ ಇಂಡಿಯನ್​ ಕಾಂಕ್ರೀಟ್​ ಇನ್​ಸ್ಟಿಟ್ಯೂಟ್​ ಚೇರ್ಮನ್​ ಸುರೇಶ ಕಿರೇಸೂರ, ಡಾ. ಎಂ.ಆರ್​. ಪಾಟೀಲ, ಡಾ. ಆನಂದ ಹುಣಶ್ಯಾಳ, ಸಂತೋಷ ಅಂಚಟಗೇರಿ, ಎ.ಸಿ. ತಹಸೀಲ್ದಾರ್​, ಇತರರು ಇದ್ದರು. 
ಧಾರವಾಡ

ಅ. 2ರಿಂದ ಹುಬ್ಬಳ್ಳಿಯಲ್ಲಿ ಬಿಲ್ಡ್​ ಟೆಕ್​ ಎಕ್ಸಪೋ

ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವವರಿಗೆ ಇಲ್ಲಿದೆ ಮಾರ್ಗದರ್ಶನ

ಹುಬ್ಬಳ್ಳಿ: ಇಂಡಿಯನ್​ ಕಾಂಕ್ರೀಟ್​ ಇನ್​ಸ್ಟಿಟ್ಯೂಟ್​ ಹುಬ್ಬಳ್ಳಿ ಧಾರವಾಡ ಸೆಂಟರ್​ ಹಾಗೂ ಯುಎಸ್​ ಕಮ್ಯೂನಿಕೇಶನ್​ ಆಶ್ರಯದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಕಟ್ಟಡ ಹಾಗೂ ಗೃಹಾಲಂಕಾರ ವಸ್ತುಗಳ ಪ್ರದರ್ಶನ "ಬಿಲ್ಡ್​ ಟೆಕ್​ ಎಕ್ಸಪೋ'ವನ್ನು ಅಕ್ಟೋಬರ್​ 2ರಿಂದ ಮೂರು ದಿನಗಳವರೆಗೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸೆಂಟರ್​ ಚೇರ್ಮನ್​ ಸುರೇಶ ಕಿರೇಸೂರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಅ. 2ರಂದು ಮಧ್ಯಾಹ್ನ 12ಕ್ಕೆ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಪ್ರದರ್ಶನ ಉದ್ಘಾಟನೆ ನೆರವೇರಿಸುವರು. ಪಿಡಬ್ಲೂಡಿ ಚೀಫ್ ಇಂಜಿನಿಯರ್​ ಶಂಕರಗೌಡ ಪಾಟೀಲ, ಕೈಗಾ ಪ್ರೊಜೆಕ್ಟ್​ ಡೈರೆಕ್ಟರ್​ ಸುರೇಶ ಕುಲಕರ್ಣಿ, ಸಂಜಯ ಅಲಮೇಲಕರ, ವಲ್ಲಭ ಪಾತುರಕರ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

100ಕ್ಕೂ ಹೆಚ್ಚು ಸ್ಟಾಲ್​ಗಳನ್ನು ಮಾಡಲಾಗಿದ್ದು, ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ನೋಡಬಹುದು. ಕಳೆದ 20 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಗ್ರಾಹಕರಿಗೆ, ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಇಂತಹ ಪ್ರದರ್ಶನ ಏರ್ಪಡಿಸುತ್ತ ಬರಲಾಗಿದೆ ಎಂದರು.

ಆಧುನಿಕ ಕಟ್ಟಡ ನಿರ್ಮಾಣ ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ, ನವೀನ ಮಾದರಿಯ ನಕ್ಷೆ, ವಿನ್ಯಾಸ, ಕಟ್ಟಡ ಸಾಮಗ್ರಿ ಮುಂತಾದವುಗಳನ್ನು ಜನರಿಗೆ ಪರಿಚಯಿಸಲಾಗುವುದು. ಆರ್ಕಿಟೆಕ್ಚ್, ಸಿವಿಲ್​ ಇಂಜಿನಿಯರ್ಸ್​ಗಳು ಅಗತ್ಯ ಮಾಹಿತಿ ನೀಡುವುರು. ಒಂದೇ ಸೂರಿನಡಿ ನಿರ್ಮಾಣ ಕ್ಷೇತ್ರದ ಸಮಗ್ರ ಮಾಹಿತಿ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದರು.

ಗೃಹಾಲಂಕಾರ ವಸ್ತುಗಳು, ಹೊಳಪಿನ ಕಲ್ಲುಗಳು, ಟೈಲ್ಸ್​, ಗ್ಲಾಸ್​, ಇಟ್ಟಿಗೆ, ಗ್ರಾನೈಟ್ಸ್​, ಬಣ್ಣ, ಸ್ಟೀಲ್​, ಕಿಟಕಿ, ಪ್ಲೆವುಡ್​, ವಿದ್ಯುತ್​ ಉಪಕರಣಗಳು, ಕಿಚನ್​, ವಾಲ್​ ಪೇಪರ್​, ಸಿಮೆಂಟ್​ ಬ್ಲಾಕ್​ ಇತ್ಯಾದಿಗಳು ನೋಡಲು ಸಿಗಲಿವೆ.

ಸೆಂಟರ್​ನ ಕಾರ್ಯನಿರ್ವಾಹಕ ಮಂಡಳಿ ಸದಸ್ಯ ಡಾ. ಎಂ.ಆರ್​. ಪಾಟೀಲ ಮಾತನಾಡಿ, ಆಧುನಿಕ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಮಾಡುವುದು ಎಷ್ಟು ಅಗತ್ಯ ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರಿಗೆ ಉಚಿತ ಡ್ರಾವಿಂಗ್​ ಕೂಡ ನೀಡಲಾಗುವುದು ಎಂದರು.

ಡಾ. ಆನಂದ ಹುಣಶ್ಯಾಳ, ಸಂತೋಷ ಅಂಚಟಗೇರಿ, ಸುರೇಶ ಪಾಟೀಲ, ಕಲ್ಮೇಶ್ವರಪ್ಪ ತೋಟದ, ಎ.ಸಿ. ತಹಸೀಲ್ದಾರ್​ ಅವರು ಮಾತನಾಡಿ, ಗ್ರಾಹಕರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಿಕೊಳ್ಳುವ ಬಗ್ಗೆ ಇಲ್ಲಿ ಸಮಗ್ರ ಮಾಹಿತಿ ದೊರೆಯಲಿದೆ. ನಿರ್ಮಾಣ ಕ್ಷೇತ್ರದ ಪ್ರತಿ ವರ್ಷದ ಬದಲಾವಣೆಗಳನ್ನು ಪ್ರದರ್ಶನದಲ್ಲಿ ತೋರಿಸಲಾಗುವುದು ಎಂದರು.