ಸಂಕೇತ್ ಯಾದವ್, ಸಿದ್ದೇಶ ಭೋಸಲೆ, ವೈಭವ ಚವಾಣ್
ಧಾರವಾಡ: ಟಿಬೆಟ್ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂಡುಪ್ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.
ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಭುದರ್ಗಡ್ನ ಸಂಕೇತ್ ಯಾದವ್ (24), ಸಿದ್ದೇಶ ಭೋಸಲೆ (18), ವೈಭವ ಚವಾಣ್ (30) ಬಂಧಿತ ಆರೋಪಿಗಳು. ಏ. 29ರಂದು ಹು&ಧಾ ಬೈಪಾಸ್ನ ಹಳಿಯಾಳ ರಸ್ತೆಯ ಕೆಳ ಸೇತುವೆ ಬಳಿ ತಾಶಿ ಧೋಂಡುಪ್ ಶವ ಪತ್ತೆಯಾಗಿತ್ತು. ಸ್ಥಳಿಯರಿಂದ ಅಪಘಾತವಾಗಿರುವ ಮಾಹಿತಿ ಬಂದಿತ್ತು. ಸ್ಥಳ ಪರಿಶೀಲನೆ ಮಾಡಿದಾಗ ಮೃತನ ದೇಹದ ಮೇಲೆ ಹಲ್ಲೆಯ ಗಾಯಗಳಿದ್ದವು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಲಾಗಿತ್ತು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು ಎಂದರು.
ಮೃತ ತಾಶಿ ಧೊಂಡುಪ್ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಕ್ಯಾಂಪ್ನಲ್ಲಿ ಬೌದ್ಧ ಸನ್ಯಾಸಿಯಾಗಿದ್ದರು. ಏ. 29ರಂದು ಐವರು ಆರೋಪಿಗಳು ಹಣದ ಆಸೆಗಾಗಿ ತಾಶಿ ಧೊಂಡುಪ್ನನ್ನು ಕಾರ್ನಲ್ಲಿ ಅಪಹರಣ ಮಾಡಿದ್ದರು. ಕಾಲಿಗೆ ಹಗ್ಗ ಕಟ್ಟಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ನಂತರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಎಸೆದು ಹೋಗಿದ್ದರು. ತಾಂತ್ರಿಕ ಹಾಗೂ ವೈಜ್ಞಾನಿಕ ಸಾಾಧಾರಗಳ ನೆರವಿನಿಂದ ಮೂವರನ್ನು ಕೊಲ್ಲಾಪುರದ ಭುದರ್ಗಡ್ನಲ್ಲಿ ಬಂಧಿಸಲಾಗಿದೆ. ಪ್ರಕರಣ ಭೇದಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಮಹಾರಾಷ್ಟ್ರ ಪೊಲೀಸರು ಸಹಕರಿಸಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಗುಂಜನ್ ಆರ್ಯ ತಿಳಿಸಿದರು.
ಐವರು ಆರೋಪಿಗಳಲ್ಲಿ ಕೆಲವರು ಕಬ್ಬು ಕಡಿಯುವ ಗ್ಯಾಂಗ್ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದರು. ಅದರಲ್ಲೊಬ್ಬ ಬೌದ್ಧ ಬಿಕ್ಕುಗಳ ಬಳಿ ಸಾಕಷ್ಟು ಹಣವಿರುತ್ತದೆ ಎಂದು ಹೇಳಿದ್ದ. ಏ. 28ರಂದು ಮುಂಡಗೋಡಕ್ಕೆ ಬಂದಿದ್ದ ಆರೋಪಿಗಳು ಬೌದ್ಧ ಬಿಕ್ಕುಗಳನ್ನು ಹುಡುಕುತ್ತಿದ್ದರು. ರಾತ್ರಿ 11 ಗಂಟೆ ಸುಮಅರಿಗೆ ಒಬ್ಬನೇ ವಾಕಿಂಗ್ ಮಾಡುತ್ತಿದ್ದ ತಾಶಿ ಧೊಂಡೂಪ ಇವರಿಗೆ ಸಿಕ್ಕಿದ್ದ. ಹಗ್ಗದಿಂದ ಆತನ ಕಾಲು ಕಟ್ಟಿ ಕಾರ್ನಲ್ಲಿ ಅಪಹರಿಸಿದ್ದಾರೆ. ಆತನ ಬಳಿ ಹಣ ಇಲ್ಲದ್ದರಿಂದ ಸಿಟ್ಟಿಗೆದ್ದು ಮಾರಣಾಂತಿಕವಾಗಿ ಥಳಿಸಿದ್ದಾರೆ. ಮೂಗು ಹಾಗೂ ಕುತ್ತಿಗೆ ಭಾಗಕ್ಕೆ ಪೆಟ್ಟು ತಗುಲಿ ತಾಶಿ ಕಾರಿನಲ್ಲಿ ಮೃತಪಟ್ಟಿದ್ದಾನೆ. ಗಾಬರಿಗೊಂಡ ಆರೋಪಿಗಳು ಧಾರವಾಡ ಕಡೆ ಬಂದು ಮೃತದೇಹ ಎಸೆದುಹೋಗಿದ್ದರು ಎಂದು ಎಸ್ಪಿ ಗುಂಜನ್ ಆರ್ಯ ತಿಳಿಸಿದರು.