boom barricade ಹುಬ್ಬಳ್ಳಿ ಧಾರವಾಡ ಬಿಆರ್​ಟಿಎಸ್​ ಕಾರಿಡಾರ್​ನಲ್ಲಿರುವ ಬೂಮ್​ ಬ್ಯಾರಿಕೇಡ್​. 
ಧಾರವಾಡ

boom barricade ಚಿಗರಿ ರಸ್ತೆಗೆ ಇನ್ನು ಖಾಸಗಿಯವರು ಬರುವಂತಿಲ್ಲ

ಪ್ರಮುಖ ಮುಖ್ಯಾಂಶಗಳು

  • ಬಿಆರ್​ಟಿಎಸ್​ ಕಾರಿಡಾರ್​ ಪ್ರವೇಶಿಸಿದರೆ ಜೋಕೆ
  • ಅನಧಿಕೃತ ವಾಹನ ಸಂಚಾರ ನಿಷೇಧ
ಹುಬ್ಬಳ್ಳಿ: boom barricade ಹುಬ್ಬಳ್ಳಿ ಧಾರವಾಡ ಬಿಆರ್​ಟಿಎಸ್​ ಕಾರಿಡಾರ್​ನಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಮತ್ತೆ ಬ್ರೇಕ್​ ಹಾಕಲಾಗಿದೆ.
ಅವಳಿನಗರ ಮಧ್ಯೆ ತ್ವರಿತ ಬಸ್​ ಸಂಚಾರಕ್ಕಾಗಿ ನಿಮಿರ್ಸಲಾದ ಪ್ರತ್ಯೇಕ ಕಾರಿಡಾರ್​ನಲ್ಲಿ ಕಳೆದ ಕೆಲ ದಿನಗಳಿಂದ ಖಾಸಗಿ ವಾಹನಗಳ ಸಂಚಾರ ವಿಪರೀತವಾಗಿತ್ತು. ಇದೀಗ ಮತ್ತೆ ಇವುಗಳಿಗೆ ಕಡಿವಾಣ ಹಾಕಲು ಬಿಆರ್​ಟಿಎಸ್​ ಕಂಪನಿ ಮುಂದಾಗಿದೆ.
ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲು ಈ ಹಿಂದೆ ಪ್ರತಿ ಜಂಕ್ಶನ್​ಗಳಲ್ಲಿ ಬೂಮ್​ ಬ್ಯಾರಿಕೇಡ್​ಗಳನ್ನು ನಿರ್ಮಿಸಲಾಗಿತ್ತು. ಇವು ಬಿಆರ್​ಟಿಎಸ್​ ಚಿಗರಿ ಬಸ್​ ಬಂದಾಗ ಮಾತ್ರ ತೆರೆಯುತ್ತಿದ್ದವು. ಇದಕ್ಕಾಗಿ ಸಾಫ್ಟ್‌ವೇರ್​ ಅಳವಡಿಸಲಾಗಿತ್ತು. ಬಸ್​ಗಳಿಗೆ ಟ್ಯಾಗ್​ ನೀಡಲಾಗಿತ್ತು. ಇದರ ಹೊರತು ಪೊಲೀಸ್​ ವಾಹನಗಳು, ಆಂಬುಲನ್ಸ್​ಗಳಿಗೆ ಕಂಪನಿ ವತಿಯಿಂದ ಟ್ಯಾಗ್​ಗಳನ್ನು ನೀಡಲಾಗಿತ್ತು.
ಟ್ಯಾಗ್​ ಇರುವ ವಾಹನಗಳಿಗೆ ಬೂಮ್​ ಬ್ಯಾರಿಕೇಡ್​ಗಳು ಆಟೊಮೆಟಿಕ್​ ಆಗಿ ತೆರೆಯುತ್ತಿದ್ದವು. ಕೆಲ ದಿನಗಳ ಹಿಂದೆ ಸಾಫ್ಟ್‌ವೇರ್ ಕೈಕೊಟ್ಟು, ಬ್ಯಾರಿಕೇಡ್​ಗಳು ಅಲ್ಲಲ್ಲಿ ದುರಸ್ತಿಗೆ ಬಂದಿದ್ದರಿಂದ ಬ್ಯಾರಿಕೇಡ್​ಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಬ್ಯಾರಿಕೇಡ್​ ಇಲ್ಲದ ಕಾರಣಕ್ಕೆ ಕಾರಿಡಾರ್​ನಲ್ಲಿ ಖಾಸಗಿ ವಾಹನಗಳು, ಬೈಕ್​ಗಳು ಎಲ್ಲೆಂದರಲ್ಲಿ ನುಗ್ಗುತ್ತಿದ್ದವು. ಎಷ್ಟೇ ದಂಡ ಪ್ರಯೋಗ ಮಾಡಿದರೂ ಖಾಸಗಿ ವಾಹನಗಳ ಉಪಟಳ ತಪ್ಪಿರಲಿಲ್ಲ.
ಬ್ಯಾರಿಕೇಡ್​ ಸ್ಥಗಿತ ಆದ ನಂತರ ಬಹುಶಃ ಖಾಸಗಿ ವಾಹನಗಳಿಗೂ ಕಾರಿಡಾರ್​ ಮುಕ್ತ ಮಾಡಿಲಾಗಿದೆಯೇ? ಎಂಬಂತೆ ವಾಹನಗಳು ಓಡಾಡಲು ಶುರು ಮಾಡಿಕೊಂಡಿದ್ದವು. ಆದರೆ, ಬಿಆರ್​ಟಿಎಸ್​ ಕಂಪನಿಯು ಸಿಸಿ ಕ್ಯಾಮೆರಾ ವೀಕ್ಷಣೆ ಮಾಡಿ ಅನಧಿಕೃತ ಪ್ರವೇಶ ಮಾಡಿದ ಬಹುತೇಕ ಖಾಸಗಿ ವಾಹನಗಳಿಗೆ ದಂಡ ಪ್ರಯೋಗ ಮಾಡಿದೆ.
ಪೊಲೀಸ್​ ಇಲಾಖೆ ಮೂಲಕ ಮಾಲೀಕರಿಗೆ ಈಗಾಗಲೇ ನೋಟಿಸ್​ ಕಳಿಸಲಾಗಿದೆ. ದಂಡದ ಮೊತ್ತವನ್ನೂ ಅದರಲ್ಲಿ ನಮೂದಿಸಲಾಗಿದ್ದು, ಖಾಸಗಿ ವಾಹನ ಮಾಲೀಕರು ದಂಡ ಪಾವತಿಸಬೇಕಾಗಿದೆ.
ಇದುವರೆಗೂ ಬೂಮ್​ ಬ್ಯಾರಿಕೇಡ್​ ಇಲ್ಲದ ಕಾರಣಕ್ಕೆ ಖಾಸಗಿ ವಾಹನಗಳ ಉಪಟಳ ಹೆಚ್ಚಾದ ಹಿನ್ನಲೆಯಲ್ಲಿ ಇವುಗಳನ್ನು ದುರಸ್ತಿ ಪಡಿಸಲಾಗಿದೆ. ಸಾಫ್ಟ್‌ವೇರ್​ ಅಪ್​ಡೇಟ್​ ಮಾಡಲಾಗಿದ್ದು, ಇದೀಗ ಸರಿಯಾಗಿ ಕಾರ್ಯ ನಿರ್ವಹಿಸಲಿವೆ. ಹಾಗಾಗಿ ಖಾಸಗಿ ವಾಹನಗಳಿಗೆ ಮತ್ತೆ ಕಡಿವಾಣ ಹಾಕಲಾಗಿದೆ ಎಂದು ಬಿಆರ್​ಟಿಎಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಧ್ಯೆ 22ಕ್ಕೂ ಹೆಚ್ಚು ಜಂಕ್ಶನ್​ಗಳಿವೆ. ಈ ಎಲ್ಲ ಜಂಕ್ಶನ್​ಗಳಲ್ಲಿ ಇದೀಗ ಬೂಮ್​ ಬ್ಯಾರಿಕೇಡ್​ ಅಳವಡಿಸಲಾಗಿದೆ.