ಧಾರವಾಡ ಕ.ವಿ.ವ. ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರೊ. ಕೆ.ಎಸ್. ದೇಶಪಾಂಡೆ ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಶಿವಾನಂದ ಕುಬಸದ ಮಾತನಾಡಿದರು
ಧಾರವಾಡ: ಪುಸ್ತ್ತಕಗಳು ಮಾನವ ನಿರ್ಮಿತ ಪವಾಡ. ಪುಸ್ತಕಗಳು Books ಜ್ಞಾನದ ಅಮೂಲ್ಯ ಭಂಡಾರಗಳು. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳು ಸಹಕಾರಿ ಎಂದು ಮುಧೋಳದ ಸಾಹಿತಿ ಡಾ. ಶಿವಾನಂದ ಕುಬಸದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶುಕ್ರವಾರ ಆಯೋಜಿಸಿದ್ದ ಪ್ರೊ. ಕೆ.ಎಸ್. ದೇಶಪಾಂಡೆ ದತ್ತಿ ಕಾರ್ಯಕ್ರಮದಲ್ಲಿ ‘ನಾನು ನನ್ನ ಪುಸ್ತಕ ಪ್ರಪಂಚ’ ವಿಷಯ ಕುರಿತು ಮಾತನಾಡಿದರು.
ಪ್ರತಿಯೊಬ್ಬರೂ ಬಾಲ್ಯದಿಂದಲೇ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಪುಸ್ತಕ ಓದು ನಮ್ಮಲ್ಲಿ ಸೃಜನಶೀಲತೆ ಹುಟ್ಟು ಹಾಕುತ್ತದೆ. ಒಳ್ಳೆಯ ಚಿಂತನೆಗಳನ್ನು ಮೂಡಿಸುತ್ತದೆ. ನನ್ನ ಓದಿಗೆ ನನ್ನ ಮನೆಯ ವಾತಾವರಣವೇ ಪ್ರೇರಣೆಯಾಯಿತು ಎಂದರು.
ನನ್ನ ತಂದೆ ನನ್ನ ಓದಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ನಾನು ಓದಿದ ಕವಿತೆಗಳು ಇಂದಿಗೂ ನನ್ನ ಸ್ಮತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿವೆ. ಕಾಲೇಜು ದಿನಗಳಲ್ಲಿ ತ.ರಾ.ಸು. ಅನಕೃ, ಬಸವರಾಜ ಕಟ್ಟಿಮನಿಯವರ ಕಾದಂಬರಿಗಳು ನನ್ನ ಓದಿಗೆ ಪುಷ್ಠಿ ನೀಡಿದವು.
ಓದುವುದು ಕೇವಲ ಸಮಯ ಕಳೆಯುವ ಸಾಧನವಲ್ಲ. ಅದು ನಮ್ಮ ಜೀವನ ಬೆಳಗುವ ದೀವಿಗೆ. ನಮ್ಮಲ್ಲಿ ಏಕಾಗ್ರತೆ ಹೆಚ್ಚಿಸಲು ಪುಸ್ತಕಗಳೇ ಸಹಕಾರಿಗಳಾಗಬಲ್ಲವು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಪ್ರೊ. ಕೆ.ಎಸ್. ದೇಶಪಾಂಡೆ ನನಗೆ ಸದಾಕಾಲ ಸ್ಮರಣೀಯರು. ನನ್ನ ಓದಿಗೆ ಅವರೇ ಸ್ಫೂರ್ತಿ. ಅವರ ಮನೆಯು ಒಂದು ಗ್ರಂಥಾಲಯದಂತಿತ್ತು. ವೈದ್ಯನಾದ ನನಗೆ ಸಾಹಿತ್ಯದ ಅಭಿರುಚಿ ಮೂಡಿಸಿದವರೇ ಪ್ರೊ. ಕೆ.ಎಸ್. ದೇಶಪಾಂಡೆ ಎಂದು ಸ್ಮರಿಸಿದರು.
ಶ್ರೀನಿವಾಸ ವಾಡಪ್ಪಿ, ಸತೀಶ ತುರಮರಿ, ಶಂಕರ ಹಲಗತ್ತಿ, ಸಿ.ಯು. ಬೆಳ್ಳಕ್ಕಿ, ರಾಘವೇಂದ್ರ ಪಾಟೀಲ, ಜಯದೇವ ಹಿರೇಮಠ, ಪ್ರೊ. ಎಸ್.ಎಲ್. ಸಂಗಮ, ಡಾ. ವಿನಾಯಕ ಬಂಕಾಪುರ, ಸತ್ಯಬೋದ ಸವಣೂರ, ಪ್ರತಿಭಾ ಕುಲಕರ್ಣಿ ವಿದ್ಯಾರ್ಥಿಗಳು ಇದ್ದರು.