blood donation ಹುಬ್ಬಳ್ಳಿಯ ಐಬಿಎಂಆರ್ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಚ್.ವಿ. ಬೆಳಗಲಿ, ಪ್ರಶಾಂತ ಕುರಹಟ್ಟಿ, ವೈಶಾಲಿ, ಸಮೀರ್ ಗುಡಿ, ಅಣ್ಣಪ್ಪ ಕೊರವರ ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ: blood donation ಐಬಿಎಂಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ರೋಟರಿ ಕ್ಲಬ್ ಎಲೈಟ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಐಬಿಎಂಆರ್ ಕಾಲೇಜಿನಲ್ಲಿ ಆಯೋಜಿಸಲಾಯಿತು.
ರಕ್ತದಾನ ಶಿಬಿರದಲ್ಲಿ ವೈದ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದರು.
ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಹಾಗೂ ಸಮಾಜದಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ಯುವಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಎಲೈಟ್ ಅಧ್ಯಕ್ಷ ಪ್ರಶಾಂತ್ ಕುರಹಟ್ಟಿ, ಐಬಿಎಂಆರ್ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ವೈಶಾಲಿ ಹಾಗೂ ಪ್ರಮುಖರಾದ ಸಮೀರ್ ಗುಡಿ ಉಪಸ್ಥಿತರಿದ್ದರು.