ಹುಬ್ಬಳ್ಳಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸ್ವಾಮೀಜಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಕಾರವಾರ ರಸ್ತೆಯ ಇಎಸ್ಐ ಆಸ್ಪತ್ರೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ ಮಾತನಾಡಿ, ಹುಬ್ಬಳ್ಳಿಯ ಪ್ರಸಿದ್ಧ ಮೂರುಸಾವಿರ ಮಠದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ ನೀಡಿರುವ ಹೇಳಿಕೆ ಖಂಡನೀಯ ಎಂದರು.
ಸ್ವಾಮೀಜಿಗಳನ್ನು ಗೌರವಿಸುವುದು ಹಿಂದೂ ಸಂಸ್ಕೃತಿ. ಆದರೆ, ಮುಖ್ಯಮಂತ್ರಿ ಅವರು ಅಧಿಕಾರದ ಮದದಲ್ಲಿ ಸ್ವಾಮೀಜಿಗಳನ್ನು ನಿಂದಿಸಿದ್ದಾರೆ. ಅಧಿಕಾರ ಸಿಕ್ಕ ತಕ್ಷಣ ತಲೆಗೇರಿದ ದರ್ಪ ಎಂತವರನ್ನೂ ಮಣ್ಣುಪಾಲು ಮಾಡುತ್ತದೆ ಎಂದು ಎಚ್ಚರಿಸಿದರು.
ಸಿಎಂ ಡಿ.ಕೆ. ಶಿವಕುಮಾರ ಅವರು ತಕ್ಷಣ ಮಠಾಧೀಶರ ಹಾಗೂ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ ಮಾತನಾಡಿ, ರಾಜ್ಯದ ಪ್ರತಿ ಮಠಗಳು ತಮ್ಮದೇ ಆದ ಪರಂಪರೆ, ಸಾಮರ್ಥ್ಯ ಹಾಗೂ ಜನಪರ ಕಳಕಳಿಯೊಂದಿಗೆ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿವೆ. ಇಂತಹ ಗೌರವಾನ್ವಿತ ಮಠಗಳ ಪೈಕಿ ಹುಬ್ಬಳ್ಳಿಯ ಪ್ರಸಿದ್ಧ ಮೂರುಸಾವಿರ ಮಠದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದರು.
ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಪ್ರಭು ನವಲಗುಂದಮಠ, ರಂಗ ಕಠಾರೆ, ರಾಜು ಜರತಾರಘರ, ಜಗದೀಶ ಬುಳ್ಳಾನವರ, ಲಕ್ಷ್ಮೀಕಾಂತ ಘೋಡಕೆ, ಗುರು ಬನ್ನಿಕೊಪ್ಪ, ರಾಜು ಕೋರ್ಯುಣಮಠ, ಗಜು ಜಡಿ, ಮಂಜುನಾಥ ಚಿಂತಗಿಂಜಲ, ಗೋಪಾಲ ಕಲ್ಲೂರ, ನೀಲಕಂಠ ತಡಸದಮಠ, ಕಿರಣ ಲದ್ವಾ, ರಂಗಸ್ವಾಮಿ ಬಳ್ಳಾರಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.