ಬಿಹಾರ (Bihar) ವಿಧಾನಸಭೆ ಚುನಾವಣೆ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್  
ಧಾರವಾಡ

ಮೋಸದಿಂದ ಬಿಹಾರ (Bihar) ಚುನಾವಣೆ ಗೆದ್ದ ಬಿಜೆಪಿ

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಬಿಹಾರದಲ್ಲಿ ಕೆಲಸ ಮಾಡಿದೆ
  • ಅಧಿಕಾರ ಬದಲಾವಣೆ ನಿರ್ಧಾರ ಕಾಂಗ್ರೆಸ್​ನ ಹೈಕಮಾಂಡ್​ಗೆ ಬಿಟ್ಟ ವಿಚಾರ
  • ಈ ಭಾಗದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದೆ. ಮೋಸದಿಂದ ಚುನಾವಣೆಗಳನ್ನು ಗೆಲ್ಲುವ ಪ್ರಧಾನಿಯನ್ನು ಇದುವರೆಗೆ ನೋಡಿಯೇ ಇರಲಿಲ್ಲ. ಸ್ವಯಂಘೋಷಿತ ವಿಶ್ವಗುರು ಮೋದಿಯವರಿಗೆ ಈ ರೀತಿ ಮೋಸದಿಂದ ಚುನಾವಣೆಗಳನ್ನು ಗೆಲ್ಲುವುದು ಸರಿ ಎನಿಸುತ್ತದೆಯೆ ಎಂದು ಪ್ರಶ್ನಿಸಿದರು.
ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಹಿನ್ನೆಡೆ ಅನುಭವಿಸಿತ್ತು. ಆದರೆ, ಇವಿಎಂ ಮತಗಳ ಎಣಿಕೆಯಲ್ಲಿ ಬಿಜೆಪಿ ನಾಗಾಲೋಟದಿಂದ ಮುನ್ನುಗ್ಗಿತ್ತು. ಮತಗಳ ಅಂಕಿ ಅಂಶಗಳನ್ನು ಗಮನಿಸಿದರೆ ಚುನಾವಣೆಯಲ್ಲಿ ಮೋಸ ನಡೆದಿರುವುದು ಗೊತ್ತಾಗುತ್ತದೆ ಎಂದರು.
ದೆಹಲಿಯಲ್ಲಿ ಬಾಂಬ್ ಸ್ಪೋಟ ನಡೆದಾಗ ಪ್ರಧಾನಿ ಮೋದಿಯವರು ಭೂತಾನ್​ನಲ್ಲಿ ಇದ್ದರು. ಸ್ಪೋಟ ಸಂಭವಿಸಿದ ತಕ್ಷಣ ದೇಶಕ್ಕೆ ಮರಳಬೇಕಿದ್ದ ಪ್ರಧಾನಿ, ಅಲ್ಲಿನ ರಾಜನ ಜನ್ಮದಿನ ಸೇರಿದಂತೆ ಸಂಪೂರ್ಣ ಕಾರ್ಯಕ್ರಮ ಮುಗಿಸಿಕೊಂಡೇ ದೇಶಕ್ಕೆ ಮರಳಿದರು. ಪ್ರಧಾನಿಯ ಈ ವರ್ತನೆ ಆ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರನ್ನು ಭೇಟಿಯಾಗಿ ಐದು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದ್ದಾರೆ. ಪ್ರಧಾನಿ ಅವರು ರಾಜ್ಯದ ಬೇಡಿಕೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.
ಮುಖ್ಯಮಂತ್ರಿ ಸ್ಥಾನದ ಅಧಿಕಾರ ಬದಲಾವಣೆ ನಿರ್ಧಾರ ಕಾಂಗ್ರೆಸ್​ನ ಹೈಕಮಾಂಡ್​ಗೆ ಬಿಟ್ಟ ವಿಚಾರ. ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಿನ ಅಧಿವೇಶನಗಳು ನಡೆದಿವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚಿನ ಸಮಯ ನೀಡಿದೆ. ಈ ಭಾಗದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೂ ಈ ಭಾಗದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ನೀಡಲಾಗುವುದು ಎಂದು ಹೇಳಿದರು.