bjp protest ಶ್ರೀ ಭವಾನಿಶಂಕರ ನಾರಾಯಣ ದೇವಸ್ಥಾನ ಆವರಣದ ಪುಷ್ಕರಣಿ ಮೇಲೆ ನಿರ್ಮಿಸಿರುವ ರಸ್ತೆ ತೆರವುಗೊಳಿಸಿ, ಪುಷ್ಕರಣಿ ಕುರಹು ಪತ್ತೆಗೆ ಪತ್ರ ಬರೆದು ಸರ್ವೇ ನಡೆಸಲು ಆಗ್ರಹಿಸಿ ಪಾಲಿಕೆ ಬಿಜೆಪಿ ಸದಸ್ಯರು, ಹುಬ್ಬಳ್ಳಿಯ ಪಾಲಿಕೆ ಆಯುಕ್ತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಶ್ರೀ ಭವಾನಿಶಂಕರ ದೇವಸ್ಥಾನ ಆವರಣದ ಪುಷ್ಕರಣಿ ಕುರಹು ಪತ್ತೆಗೆ ಪತ್ರ ಬರೆದು ಸರ್ವೇ ನಡೆಸಲು ಆಗ್ರಹಿಸಿ ಪಾಲಿಕೆ
ಬಿಜೆಪಿ ಸದಸ್ಯರು, ಇಲ್ಲಿಯ ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಮಾತನಾಡಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಅಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಹುಬ್ಬಳ್ಳಿಯಲ್ಲಿ ಶಾಂತಿ ಭಂಗ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತ ಕಾಪಾಡಬೇಕಾದ ಅವರು ಸರ್ಕಾರದ ಕೈ ಗೊಂಬೆಯಂತಾಗಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ನಿರ್ಮಿಸಿದ್ದಾರೆ. ಕೂಡಲೇ ನಿರ್ಮಿಸಿದ ರಸ್ತೆಯನ್ನು ತೆರವುಗೊಳಿಸಬೇಕು. ದೇವಸ್ಥಾನ ಹಾಗೂ ಪುಷ್ಕರಣಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಮತ್ತೊಬ್ಬ ಸದಸ್ಯ ರಾಮಣ್ಣ ಬಡಿಗೇರ ಮಾತನಾಡಿ, ಆಸಾರ ಓಣಿಯ ಶ್ರೀ ಭವಾನಿಶಂಕರ ದೇವಸ್ಥಾನ ಸನಾತ ಧರ್ಮದ ಪ್ರತೀಕವಾಗಿದೆ. ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಿಸಲು ಡಾ. ರುದ್ರೇಶ ಘಾಳಿ ಅನುಮತಿ ನೀಡಿದ್ದು ತಪ್ಪು. ಕೂಡಲೇ ರಸ್ತೆ ತೆರವುಗಳಿಸುವುದಲ್ಲದೆ, ಪುಷ್ಕರಣಿ ಇರುವುದರ ಕುರಿತು ಉತ್ಖನನ ಮಾಡಿಸಿ, ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪಾಲಿಕೆ ಸದಸ್ಯರು ಮತ್ತು ಆಯುಕ್ತರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ದೇವಸ್ಥಾನ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿದ ಮನೆ ಹಾಗೂ ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು, ಆಯುಕ್ತರನ್ನು ಪಟ್ಟು ಹಿಡಿದರು.
ಈಗಾಗಲೇ ಎಂಟು ಕಾಮಗಾರಿಗಳು ದೇವಸ್ಥಾನದ ಸುತ್ತಮುತ್ತ ನಡೆದಿದ್ದು, ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಆವಾಗ ಏನೂ ಮಾತನಾಡದವರು ಈಗ ಕೇಳುವುದು ಏಕೆ? ಎಂದು ಆಯುಕ್ತರು ಪ್ರಶ್ನಿಸಿದರು.
ಹಿಂದಿನದೂ ನಮಗೆ ಗೊತ್ತಿಲ್ಲ. ಪುರಾತತ್ವ ಇಲಾಖೆಯ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಿಸಿರುವುದು ಸರಿಯಲ್ಲ. ತಕ್ಷಣ ತೆರವುಗೊಳಿಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸರ್ವೇ ಮಾಡುವುದಾಗಿ ಆಯುಕ್ತರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಸಭಾ ನಾಯಕ ಶಿವು ಮೆಣಸಿನಕಾಯಿ, ಸದಸ್ಯರಾದ ರಾಧಾಭಾಯಿ ಸಫಾರೆ, ಬೀರಪ್ಪ ಖಂಡೇಕರ, ಶಿವು ಮೆಣಸಿನಕಾಯಿ, ಚಂದ್ರಿಕಾ ಮೇಸ್ತ್ರಿ, ಶೀಲಾ ಕಾಟಕರ, ಸುನೀತಾ ಮಾಳದಕರ, ಸತೀಶ ಹಾನಗಲ್, ವಿಜಯಾನಂದ ಶೆಟ್ಟಿ, ರೂಪಾ ಶೆಟ್ಟಿ, ಇತರ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.