ಸಿಹಿ ಹಂಚಿ ಸಂಭ್ರಮಿಸಿದ ಶಿವಳ್ಳಿ ಗ್ರಾಮಸ್ಥರು
ತಾಲೂಕಿನ ಶಿವಳ್ಳಿ ಗ್ರಾಮದ ಸಮೀಪದ ಮಡ್ಡಿಗುಡ್ಡದಲ್ಲಿ ಬಯೋಗ್ಯಾಸ್ ಘಟಕ ಸ್ಥಾಪನೆಗೆ ಮುಂದಾಗಿದ್ದ ಪಾಲಿಕೆ ಕ್ರಮದ ವಿರುದ್ಧ ಗ್ರಾಮಸ್ಥರು ನಡೆಸಿದ ಒಗ್ಗಟ್ಟಿನ ಹೋರಾಟಕ್ಕೆ ಜಯ ಸಿಕ್ಕಿದ್ದು, ಘಟಕ ಸ್ಥಳಾಂತರಕ್ಕೆ ಆದೇಶ ಹೊರಬಿದ್ದಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರದ ಹಸಿ ಕಸವನ್ನು ಮಡ್ಡಿಗುಡ್ಡಕ್ಕೆ ತಂದು ಬೃಹತ್ ಬಯೋಗ್ಯಾಸ್ ಪ್ಲಾಂಟ್ ನಿಮಿರ್ಸಲು ಮಹಾನಗರ ಪಾಲಿಕೆ ಖಾಸಗಿ ಕಂಪನಿಗೆ ಅವಕಾಶ ನೀಡಿತ್ತು. ಆದರೆ ಇದರಿಂದ ಪರಿಸರಕ್ಕೆ ಮಾರಕವಾಗಬಹುದು ಎಂದು ಅರಿತ ಶಿವಳ್ಳಿ, ಹೆಬ್ಬಳ್ಳಿ, ಸುಳ್ಳ, ಮಾರಡಗಿ ಹಾಗೂ ಸೋಮಾಪುರ ಗ್ರಾಮಗಳ ಜನರು ಪಕ್ಷ-ಭೇದ ಮರೆತು ವಿರೋಧಿಸಿದ್ದರು. ಗ್ರಾಮದಿಂದ ಧಾರವಾಡದವರೆಗೆ ಪಾದಯಾತ್ರೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಮಡ್ಡಿಗುಡ್ಡದಲ್ಲಿ ವನಮಹೋತ್ಸವ ನಡೆಸುವ ಮೂಲಕ "ಕಸದ ನೆಲವಲ್ಲ, ಹಸಿರಿನ ನೆಲ' ಎಂಬ ಸಂದೇಶ ರವಾನಿಸಿದ್ದರು.
ಗ್ರಾಮಸ್ಥರ ನಿರಂತರ ಹೋರಾಟಕ್ಕೆ ಮಣಿದ ಪಾಲಿಕೆ ಬಯೋಗ್ಯಾಸ್ ಘಟಕ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದೆ. ಈ ಜಯದ ಸಂತಸದಲ್ಲಿ ಶಿವಳ್ಳಿ ಗ್ರಾಮಸ್ಥರು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.