- ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
- ಪ್ರಶಸ್ತಿಗಳನ್ನು 134 ಜನರಿಗೆ ವಿತರಿಸಲಾಗುವುದು
- ಸವಾಲು-ಜವಾಬು ವಿಚಾರ ಗೋಷ್ಠಿ ಆಯೋಜಿಸಲಾಗಿದೆ
ಹುಬ್ಬಳ್ಳಿ :
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ, ಬೆಳಕು ಟ್ರಸ್ಟ್ ಕಳೆದ ಒಂದು ದಶಕದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ ಎಂದರು.
ಸಂಗೀತ, ಸಾಹಿತ್ಯ, ಚಿತ್ರಕಲೆ, ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನರನ್ನು ಗುರುತಿಸಿ, ದತ್ತಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು 134 ಜನರಿಗೆ ವಿತರಿಸಲಾಗುವುದು ಎಂದು ಹೇಳಿದರು. ಹಿರಿಯ ಸಾಹಿತಿ, ಮಾಜಿ ಸಚಿವೆ ಲೀಲಾದೇವಿ ಪ್ರಸಾದ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಶಿವರುದ್ರಯ್ಯ ವಿ.ವಿ. ಉದ್ಘಾಟಿಸುವರು. ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಮೇಲ್ಮನವಿ ವಿಭಾಗದ ಆಯುಕ್ತರಾದ ಸುಜಾತಾ ಕೆ.ಸಿ. ವಿಶೇಷ ಆಹ್ವಾನಿತರಾಗಿದ್ದಾರೆ. ಅಖಿಲ ಭಾರತ ಶಿಕ್ಷಕರ ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಚಿಂತಕ ಶ್ರೀಗುರು ಚರಂತಯ್ಯ ಹಿರೇಮಠ, ಎಲ್.ಬಿ. ಲಕ್ಕಮ್ಮನವರ, ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ, ಡಾ. ಮಲ್ಲಿಕಾ ಎಂ. ಅವರ ಪುಸ್ತಕಗಳು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಹಿಂದಿನ ಸಾಹಿತ್ಯ, ಇಂದಿನ ಸಾಹಿತ್ಯ ಕನ್ನಡಿ ಎನ್ನುವ ವಿಷಯದ ಕುರಿತು ಸವಾಲು-ಜವಾಬು ವಿಚಾರ ಗೋಷ್ಠಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕವಿಗೋಷ್ಠಿ, ಗಾಯನ, ನೃತ್ಯ ಸೇರಿ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.