ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ (beard)ಗಡ್ಡಬಿಡುವ ಸ್ಪರ್ಧೆಯಲ್ಲಿ ಗೆದ್ದ ಡಾ. ಸೋಮನಾಥ, ಸುಬ್ಬಯ್ಯ ನಾಡರ್ ಸೇರಿ ಇತರರಿಗೆ ನಟ ಮತ್ತು ಮಾಡೆಲ್ ಪರಾಸ್ ರಾಥೋಡ ಬಹುಮಾನ ವಿತರಿಸಿದರು.
ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರಥಮ ಬಾರಿಗೆ ಗಡ್ಡ ಬಿಡುವ ಸ್ಪರ್ಧೆ (beard) ಹಾಗೂ ಕ್ಯಾನ್ಸರ್ ಜಾಗೃತಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಫ್ಯಾಷನ್ ನೃತ್ಯ ಸಂಯೋಜಕ, ನಟ ಮತ್ತು ಮಾಡೆಲ್ ಪರಾಸ್ ರಾಥೋಡ ಮಾತನಾಡಿ, ಪುರುಷರ ಮುಖದ ಸೌಂದರ್ಯ ಹೆಚ್ಚಳ ಮಾಡುವುದೇ ಗಡ್ಡ ಮತ್ತು ಮೀಸೆ. ಇವುಗಳನ್ನು ಇನ್ನಷ್ಟು ರೂಪಕವಾಗಿ ತೋರಿಸುವ ಕೌಶಲವನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮನ್ನು ಸಮಾಜದಲ್ಲಿ ಗುರುತಿಸುವ ರೀತಿಯೇ ವಿಭಿನ್ನವಾಗಿರುತ್ತದೆ ಎಂದರು.
ಆರ್.ಬಿ. ಪಾಟೀಲ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಬಿ.ಆರ್. ಪಾಟೀಲ ಮಾತನಾಡಿ, ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ರೋಗ ಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಇದರಿಂದ ವೈದ್ಯರಿಗೆ ಚಿಕಿತ್ಸೆ ಸುಲಭವಲ್ಲದೆ, ರೋಗಿಗಳ ಆರೋಗ್ಯವೂ ಸುಧಾರಿಸಲಿದೆ ಎಂದರು.
ರೆಡಾನ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಸಂಜೀವ ಕುಲಗೋಡು ಕ್ಯಾನ್ಸರ್ ರೋಗ ಲಕ್ಷಣ ಮತ್ತು ಅವುಗಳಿಗೆ ಇರುವ ಚಿಕಿತ್ಸೆ ಕುರಿತು ಮಾತನಾಡಿದರು.
ಡಾ. ಸೋಮನಾಥ ಅವರಿಗೆ ಮಿಸ್ಟರ್ ಬಿಯಾರ್ಡೊ-2026, ಸುಬ್ಬಯ್ಯ ನಾಡರ್ ಅವರಿಗೆ ರನ್ನರ್ ಅಪ್ ಮಿಸ್ಟರ್ ಬಿಯಾರ್ಡೋ-2026 ಪ್ರಶಸ್ತಿ ನೀಡಲಾಯಿತು. ಸಾಲ್ಟ್ ಪೆಪ್ಪರ್ ಲುಕ್, ಅತ್ಯುತ್ತಮ ಮೀಸೆ, ಅತ್ಯುತ್ತಮ ಶೈಲಿಯ ಗಡ್ಡ, ಅತ್ಯುತ್ತಮ ಪೂರ್ಣ ಗಡ್ಡ ಮತ್ತು ಗಡ್ಡದ ರೂಕಿ ಮುಂತಾದ ವಿಭಾಗಗಳಲ್ಲಿಯೂ ಪ್ರಶಸ್ತಿ ಕೊಡಲಾಯಿತು.
ತೀರ್ಪುಗಾರರಾಗಿ ನಟ ಮತ್ತು ಮಾಡೆಲ್ ಪರಾಸ್ ರಾಥೋಡ, ರೂಪದರ್ಶಿ ಡಾ. ಶ್ರುತಿ ಹೆಗಡೆ, ಈವೆಂಟ್ ಕಂಪನಿ ಮಾಲೀಕ ವಿಕಾಸ್ ಜೈನ್ ಭಾಗವಹಿಸಿದ್ದರು.
ಕ್ಯಾನ್ಸರ್ ಮುಕ್ತರಿಂದ ರ‌್ಯಾಂಪ್ ವಾಕ್ ನಡೆಯಿತು. ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಎನ್‌ಐಎಫ್ ವಿದ್ಯಾರ್ಥಿಗಳು ವಿವರಿಸಿದರು.
ಡಿಮ್ಹಾನ್ಸ್ ತಂಡದಿಂದ ಮಾನಸಿಕ ಆರೋಗ್ಯದ ಕುರಿತು ಒಂದು ಕಿರುಚಿತ್ರ ಪ್ರದರ್ಶಿಸಲಾಯಿತು. ನಂತರ ನೃತ್ಯ ಪ್ರದರ್ಶನ ಜರುಗಿದವು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷೆ ಅಂಜನಾ ಬಸನಗೌಡರ, ಕಾರ್ಯದರ್ಶಿ ಸ್ಮಿತಾ ಮಹೇಶ, ಕಾರ್ಯಕ್ರಮ ಸಂಚಾಲಕಿ ಜ್ಯೋತಿ ನಡಕಟ್ಟಿ, ಶ್ರಾವಣಿ ಪವಾರ ಇತರರು ಇದ್ದರು.