ಹುಬ್ಬಳ್ಳಿಯ ಕೆಪಿಟಿಸಿಎಲ್​ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಎಸ್​ಆರ್​ ಕುರಿತ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಕೆಇಆರ್​ಸಿ ಚೇರ್ಮನ್​ ಪಿ. ರವಿಕುಮಾರ್​, ಎಚ್​.ಕೆ. ಜಗದೀಶ, ಜಾವಿದ್​ ಅಖ್ತರ್​ ಇದ್ದರು. 
ಧಾರವಾಡ

ಕೆಇಆರ್​ಸಿ ಎದುರು ಆಕ್ಷೇಪಣೆಗಳ ಸುರಿಮಳೆ

ಇಎಸ್​ಆರ್​ 2026ಗೆ ಗುತ್ತಿಗೆದಾರರ ತೀವ್ರ ಆಕ್ಷೇಪ

ಹುಬ್ಬಳ್ಳಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್​ಸಿ) ವತಿಯಿಂದ ಇಲ್ಲಿಯ ಗೋಪನಕೊಪ್ಪದ ಕೆಪಿಟಿಸಿಎಲ್​ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯುಚ್ಚಕ್ತಿ ಸರಬರಾಜು ಕರಡು ನಿಯಮಾವಳಿಗಳ (ಇಲೆಕ್ಟ್ರಿಸಿಟಿ ಸಪ್ಲೆ ರೆಗ್ಯುಲೇಶನ್ಸ್​- ಇಎಸ್​ಆರ್​)- 2026 ಕುರಿತ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಅನೇಕ ಗುತ್ತಿಗೆದಾರರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು.

ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಯ ಹೆಸ್ಕಾಂ ಪಾಲುದಾರರು, ಹೊಸದಾಗಿ ತಂದಿರುವ ತಿದ್ದುಪಡಿ ನಿಯಮಾವಳಿಗಳಿಗೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿದರು. ಸಾವಿರಕ್ಕೂ ಹೆಚ್ಚು ವಿದ್ಯುತ್​ ಗುತ್ತಿಗೆದಾರರು ಸಭೆಯಲ್ಲಿ ಪಾಲ್ಗೊಂಡು ಹೊಸ ತಿದ್ದುಪಡಿ ನಿಯಮಕ್ಕೆ ಸಲಹೆ ಸೂಚನೆಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ, ಸದಸ್ಯರಾದ ಎಚ್​.ಕೆ. ಜಗದೀಶ, ಜಾವಿದ್​ ಅಖ್ತರ್​ ಅವರಿದ್ದ ಆಯೋಗದ ಪೀಠದಲ್ಲಿ ಸುಮಾರು ಮೂರುವರೇ ತಾಸು ವಿಚಾರಣೆ ನಡೆಯಿತು.

ಗುತ್ತಿಗೆದಾರರಾದ ಎಂ.ಎಸ್​. ಕಣವಿ, ಎನ್​.ಎಂ. ರೇಶ್ಮೆವಾಲಾ, ಮೋಹನ ಕುಲಕರ್ಣಿ, ತುಷಾರ ಬದ್ದಿ, ಶರಣು, ಶಂಕರಪ್ಪ ಮುಂತಾದವರು ಹೊಸ ನಿಯಮಾವಳಿಯಿಂದಾಗುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.

ಯಾವುದೇ ವಿದ್ಯುತ್​ ಸಂಪರ್ಕ ಕಲ್ಪಿಸುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು, ಅನಧಿಕೃತ ಹಾಗೂ ಪರವಾನಗಿ ಪಡೆಯದವರಿಂದ ವಿದ್ಯುತ್​ ಸಂಪರ್ಕಗಳನ್ನು ಮಾಡಿಸಿ ಮುಂದಾಗುವ ಅನಾಹುತಗಳಿಗೆ ದಾರಿ ಮಾಡಿ ಕೊಡಬಾರದು. ಪ್ರತಿ ವರ್ಷ ಸರಾಸರಿ 540 ವಿದ್ಯುತ್​ ಅವಡಗಳು ಸಂಭವಿಸುತ್ತಿವೆ. ಇವು ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ಗುತ್ತಿಗೆದಾರರು ತಿಳಿಸಿದರು.

ಹೊಸ ನಿಯಮಾವಳಿಯು ಅಧಿಕೃತ ವಿದ್ಯುತ್​ ಗುತ್ತಿಗೆದಾರರಲ್ಲದವರು ಸಹ ವಿದ್ಯುತ್​ ಸಂಪರ್ಕ ಕಲ್ಪಿಸಲು ಅವಕಾಶ ಮಾಡಿಕೊಡುವಂತಿದೆ. ತಾಂತ್ರಿಕ ಅರ್ಹತೆ ಹಾಗೂ ಪರವಾನಗಿ ಪಡೆದವರು ಈ ಕೆಲಸ ಮಾಡಿದರೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.

ಸ್ವಯಂ ಪ್ರಮಾಣೀಕರಣ: ಕೆಇಆರ್​ಸಿ ಕರಡು ನಿಯಮಗಳಲ್ಲಿ 150 ಕಿಲೋವ್ಯಾಟ್​ವರೆಗಿನ ಸಾಮರ್ಥ್ಯದ ಕಡಿಮೆ ಒತ್ತಡದ ವಿದ್ಯುತ್​ ಸಂಪರ್ಕಗಳಿಗೆ ಮಾಲೀಕರೇ ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಲು (ಸೆಲ್ಫ ಸರ್ಟಿಫಿಕೇಶನ್​) ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

ವಿದ್ಯುತ್​ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ರೀತಿಯಲ್ಲಿ ನಿಯಮಗಳನ್ನು ರೂಪಿಸಬೇಕು. ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಉಪಜೀವನ ಕಿತ್ತುಕೊಳ್ಳದೇ ಅವರ ಹಿತವನ್ನೂ ಕಾಯಬೇಕು ಎಂದು ಕೋರಿದರು.

ಕಡ್ಡಾಯಗೊಳಿಸಿ: ವಿದ್ಯುತ್​ಗೆ ಸಂಬಂಧಿಸಿದ ಕಾರ್ಯಗಳನ್ನು ಅನುಮತಿ ಪಡೆದ ಗುತ್ತಿಗೆದಾರರಿಂದಲೇ ಮಾಡಿಸಬೇಕೆಂಬ ನಿಯಮ ತರಬೇಕು, ಇದರಿಂದ ನಿರುದ್ಯೋಗ ಸಮಸ್ಯೆಯನ್ನೂ ಒಂದಿಷ್ಟು ನಿವಾರಣೆ ಮಾಡಿದಂತಾಗುತ್ತದೆ ಎಂದು ಗುತ್ತಿಗೆದಾರರ ಸಂದವರು ಆಗ್ರಹಿಸಿದರು.

ವಿದ್ಯುತ್​ಗೆ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ, ನಿರ್ಧಾರಗಳನ್ನು ಕೈಗೊಳ್ಳಲು ಉತ್ತರ ಕರ್ನಾಟಕ ಭಾಗದಲ್ಲಿ ಕಾನೂನು ಪರಿಣತಿ ಹೊಂದಿದ ಓಂಬುಡ್ಸಮನ್​ ನೇಮಿಸಬೇಕು ಎಂದರು.

ಟಿಸಿಗೆ ವಿಳಂಬ ಬೇಡ: ರೈತರ ಪಂಪ್​ಸೆಟ್​ಗಳಿಗೆ ಟಿಸಿ ಅಳವಡಿಕೆಗೆ ಇರುವ ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು. ಯಾವುದೇ ವಿಳಂಬ ಮಾಡಬಾರದು. ಒಂದೇ ಬೋರ್​ವೆಲ್​ ಇದ್ದರೂ ಅದಕ್ಕೆ ಟಿಸಿ ಕೊಟ್ಟು ಸಂಪರ್ಕ ನೀಡಬೇಕು. ಸ್ಮಾರ್ಟ್​ ಮೀಟರ್​ ಅಳವಡಿಕೆಗೆ ಕೆಲವೆಡೆ ಸಮಸ್ಯೆಗಳು ಎದುರಾಗುತ್ತಿವೆ. ಅವುಗಳನ್ನು ಸರಿಪಡಿಸಬೇಕು. ತಾತ್ಕಾಲಿಕ ಸಂಪರ್ಕಕ್ಕೆ ನೀಡಿದ ಮೀಟರ್​ ಅನ್ನೇ ಮುಂದೆ ಕಾಯಂ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ಶುಲ್ಕ ಆಕರಿಸಬಾರದು ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಯಿತು.

ಹೆಸ್ಕಾಂ ಕಚೇರಿಗಳಲ್ಲಿ ಸಿಬ್ಬಂದಿ ಹಾಗೂ ಲೈನ್​ಮನ್​ಗಳ ಕೊರತೆ ಕಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್​ ಸಮಸ್ಯೆಗಳು ಎದುರಾದರೆ ಅವುಗಳನ್ನು ಸರಿಪಡಿಸಲು ವಾರಗಟ್ಟಲೆ ಕಾಯಬೇಕಾಗಿದೆ. ಖಾಲಿ ಇರುವ ಸಿಬ್ಬಂದಿ ಬೇಗ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಪಷ್ಟತೆ ನೀಡಿ: ಆಕ್ಯುಪನ್ಸಿ ಸರ್ಟಿಫಿಕೇಟ್​ (ಒಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕ ನೀಡುವ ವಿಚಾರವನ್ನು ಅನೇಕ ಗುತ್ತಿಗೆದಾರರು ಪ್ರಸ್ತಾಪಿಸಿದರು. ಒಸಿ ಇಲ್ಲದ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಮನೆಗಳು ಹಾಗೂ ತಾತ್ಕಾಲಿಕ ವಿದ್ಯುತ್​ ಸಂಪರ್ಕ ಪಡೆಯುವ ಗ್ರಾಹಕರಿಗೆ ಅನ್ವಯಿಸುವ ನಿಯಮಗಳ ಕುರಿತು ಸ್ಪಷ್ಟತೆ ಕೊಡಬೇಕು ಎಂದು ಸಭೆಯ ಗಮನ ತರಲಾಯಿತು.

ಹಿರಿಯರಿಗೆ ಆದ್ಯತೆ ಇರಲಿ: ಹಿರಿಯ ಗ್ರಾಹಕ ಮಹಾಂತಪ್ಪ ಮಾತನಾಡಿ, ವಿದ್ಯುತ್​ ಸಂಬಂಧಿಸಿದ ಕೆಲಸಗಳಿಗಾಗಿ ಕಚೇರಿಗಳಿಗೆ ಬರುವ ಹಿರಿಯ ನಾಗರಿಕರಿಗೆ ಆದ್ಯತೆ ನೀಡಬೇಕು. ಅವರನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸುವುದು ಅಥವಾ ಸುಮ್ಮನೆ ಕಾಯಿಸುವುದು ಮಾಡಬಾರದು. ಅವರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಇಆರ್​ಸಿ ಅಧಿಕಾರಿಗಳಾದ ಮುಜಾಮಿಲ್​ ಖಾನ್​, ಸಿದ್ದೇಶ್ವರ ಎನ್​., ಶ್ರೀನಿವಾಸಪ್ಪ ಇದ್ದರು.