bank dividend ಹುಬ್ಬಳ್ಳಿಯ ಶ್ರೀ ಗುರುಸಿದ್ದೇಶ್ವರ ಬ್ಯಾಂಕಿನ ಮಹಾಸಭೆಯಲ್ಲಿ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಶಾಸಕ ಮಹೇಶ ಟೆಂಗಿನಕಾಯಿ ಸನ್ಮಾನಿಸಿದರು. ಶಂಕರಣ್ಣ ಮುನವಳ್ಳಿ, ವಿಜಯಾನಂದ ಹೊಸಕೋಟಿ, ವೀರಣ್ಣ ಕಲ್ಲೂರ, ಗೀತಾ ಮುಳ್ಳಳ್ಳಿ ಇತರರು ಇದ್ದರು.
ಹುಬ್ಬಳ್ಳಿ: bank dividend ಇಲ್ಲಿಯ ದಾಜಿಬಾನಪೇಟೆಯಲ್ಲಿರುವ ಪ್ರತಿಷ್ಠಿತ ಶ್ರೀ ಗುರುಸಿದ್ದೇಶ್ವರ ಬ್ಯಾಂಕಿನ 47ನೇ ವಾರ್ಷಿಕ ಮಹಾಸಭೆಯು ಭಾನುವಾರ ಬ್ಯಾಂಕಿನ ಶ್ರೀ ಮಹಾಂತ ಅಪ್ಪಗಳ ಸಭಾಭವನದಲ್ಲಿ ಜರುಗಿತು.
ಮಹಾಸಭೆಗೆ ಆಗಮಿಸಿದ ಜಗದ್ಗುರು ಶ್ರೀ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರು ಗೌರವಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಂಕರಣ್ಣ ಮುನವಳ್ಳಿ ಅವರು, ಬ್ಯಾಂಕಿನ ವಾರ್ಷಿಕ ವರದಿ ವಾಚಿಸಿದರು. ಮಹಾಸಭೆಯ ವಿಷಯಗಳನ್ನು ಮಂಡಿಸಿದರು. ಬ್ಯಾಂಕ್ ಸತತವಾಗಿ ಲಾಭದಲ್ಲಿ ಇದ್ದು, ಕಳೆದ ಆರು ವರ್ಷಗಳಿಂದ ಶೇ. 10ರಷ್ಟು ಡಿವಿಡೆಂಡ್ ಅನ್ನು ನೀಡುತ್ತ ಬರಲಾಗಿದೆ. ಈ ವರ್ಷವೂ ಶೇ. 10ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಇದಕ್ಕೆ ಸದಸ್ಯರು ಒಪ್ಪಿಗೆ ನೀಡಿದರು.
ಬ್ಯಾಂಕಿನ ಶೇರುದಾರರ ಮಕ್ಕಳಾದ ತರುಣ ಬೆಲ್ಲದ, ಸುಹಾಸ್ ಮಮದಾಪುರ, ಸಮೃದ್ದ ಚೆನ್ನಿ, ನಮ್ರತಾ ಕಮಡೊಳ್ಳಿಶೆಟ್ಟರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬ್ಯಾಂಕಿನ ಹಿರಿಯ ಸದಸ್ಯ ಗುರುಸಿದ್ದಪ್ಪ ಛಬ್ಬಿ ಮಾತನಾಡಿ, ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿ. ಇದಕ್ಕೆ ಬ್ಯಾಂಕಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರ ಪರಿಶ್ರಮ ಕಾರಣ ಎಂದರು.
ಆಶೀರ್ವಚನ ನೀಡಿದ ಡಾ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಜಗದ್ಗುರು ಡಾ. ಗಂಗಾಧರರಾಜಯೋಗೀಂದ್ರ ಸ್ವಾಮೀಜಿಗಳು ಶ್ರೀ ಗುರುಸಿದ್ದೇಶ್ವರ ಬ್ಯಾಂಕ್ ಸ್ಥಾಪನೆ ಮಾಡಿದರು. ಅವರ ದೂರದೃಷ್ಟಿಯ ಫಲವಾಗಿ ಉತ್ತಮವಾಗಿ ನಡೆದುಕೊಂಡು ಹೊರಟಿದೆ. ಬ್ಯಾಂಕಿನ ವಹಿವಾಟು ಚೆನ್ನಾಗಿ ನಡೆದಿದೆ. ಅಮೃತ ಮಹೋತ್ಸವದತ್ತ ದಾಪುಗಾಲು ಇಟ್ಟಿದೆ. ಬ್ಯಾಂಕಿನಿಂದ ಸಾಲ ಪಡೆದುಕೊಂಡವರು ಸದುಪಯೋಗ ಪಡಿಸಿಕೊಂಡು ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ ಎಂದರು.
ಬ್ಯಾಂಕಿನ ಅಧ್ಯಕ್ಷರು ಗ್ರಾಹಕರಿಗೆ ಒಳ್ಳೆಯ ನ್ಯಾಯ ಒದಗಿಸುತ್ತಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ನೀಡಬೇಕು. ಆಡಳಿತ ಮಂಡಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಇದ್ದು, ಮುಂಬರುವ ದಿನಗಳಲ್ಲಿ ಎಲ್ಲರೂ ಕೂಡಿ ಬ್ಯಾಂಕ್ನ್ನು ಇನ್ನೂ ಹೆಚ್ಚು ಬೆಳೆಸಲು ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದರು.
ಆಡಳಿತ ಮಂಡಳಿ ನಿರ್ದೇಶಕರಾದ ವೀರಣ್ಣ ಕಲ್ಲೂರ, ಎಫ್.ಸಿ. ಭೂಸದ, ಮಾರುತಿ ಜಾಧವ, ಶಾಸಕ ಮಹೇಶ ಟೆಂಗಿನಕಾಯಿ, ವಿಜಯಾನಂದ ಹೊಸಕೋಟಿ, ಪ್ರೇಮಾ ಆರಟ್ಟಿ, ಗೀತಾ ಮುಳ್ಳಳ್ಳಿ, ಮಂಜುನಾಥ ಮುನವಳ್ಳಿ, ಉಮೇಶ ಅಪ್ಪೋಜಿ, ರಾಜಣ್ಣ ಬತ್ಲಿ, ಬಸವರಾಜ ಚೆನ್ನಿ, ಗುರು ಹಿರೇಮಠ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಗದೀಶ ಎಸ್. ಕಮಡೊಳ್ಳಿಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಲಿಂಬಿಕಾಯಿ ವಂದಿಸಿದರು.