ಧಾರವಾಡ: ನಗರದ ಶಿವಾಜಿ ವೃತ್ತದ ಬಳಿಯ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಂಗ್ರಹಿಸಿದ್ದನ್ನು ವಿರೋಧಿಸಿ ಬಜರಂಗ ದಳದ ಕಾರ್ಯಕರ್ತರು (protests) ಸೋಮವಾರ ರಾತ್ರಿ ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಗುಂಪು ಹಲ್ಲೆಗೆ ಯತ್ನಿಸಿದೆ ಎನ್ನಲಾಗಿದ್ದು, ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಕಸಾಯಿಖಾನೆಯಲ್ಲಿ 40ಕ್ಕೂ ಹೆಚ್ಚು ಜಾನುವಾರುಗಳನ್ನು ಸಂಗ್ರಹಿಸಲಾಗಿತ್ತು. ಈ ಮಾಹಿತಿ ತಿಳಿದ ಬಜರಂಗ ದಳ ಕಾರ್ಯಕರ್ತರು ದಾಳಿ ಮಾಡಿದ್ದರು. ಈ ವೇಳೆ ಗುಂಪೊಂದು ಕಾರ್ಯಕರ್ತರ ಮೇಲೆ ದಾಳಿಗೆ ಯತ್ನಿಸಿದೆ. ಇದರಿಂದ ಕೆರಳಿದ್ ಕಾರ್ಯಕರ್ತರು ಪ್ರತಿಭಟಿಸಿದರು. ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಜಾನುವಾರುಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಸಾಗಿಸಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮತ್ತು ಆಯುಕ್ತ ್ಡಾ. ರುದ್ರೇಶ ಘಾಳಿ ಮಧ್ಯಸ್ಥಿಕೆಯಲ್ಲಿ ಜಾನುವಾರುಗಳನ್ನು ಮಾದಭಾವಿಯ ಗೋಶಾಲೆಗೆ ಸಾಗಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇನ್ಸ್‌ಪೆಕ್ಟರ್‌ಗೆ ಗಾಯ: ಪಾಲಿಕೆಯ ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸುವ ವೇಳೆ ಹೋರಿಯ ಮೂಗುದಾರ ಹರಿದು ಓಡಾಡಿತು. ಈ ವೇಳೆ ಉಪನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ಅವರಿಗೆ ಹೋರಿಯ ಕೊಂಬು ಬಡಿದು ಗಾಯಗೊಂಡರು. ಇದೇವೇಳೆ ಸುದ್ದಿವಾಹಿನಿಯ ಕ್ಯಾಮರಾಮನ್‌ಗೂ ಗಾಯವಾಗಿದೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.