ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇಯರ್ ಜ್ಯೋತಿ ಪಾಟೀಲ, ಗುರವ್ವ ಹೊರಟ್ಟಿ (avva) ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.
ಹುಬ್ಬಳ್ಳಿ: ಪಾಲಕರು ಮತ್ತು ಗುರುಗಳು ಎರಡು ಕಣ್ಣುಗಳಿದ್ದಂತೆ. ಅವರಿಗೆ ಕೀರ್ತಿ ತರುವಂಥ ಕೆಲಸ ಮಾಡಬೇಕು. ಅಂದಾಗ (avva) ಮಾತ್ರ ಅವರಿಗೆ ಸಂತೃಪ್ತಿ ಎಂದು ಮೇಯರ್ ಜ್ಯೋತಿ ಪಾಟೀಲ ಅಭಿಪ್ರಾಯಪಟ್ಟರು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅವ್ವ ಸೇವಾ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿಯ ಲ್ಯಾಮಿಂಗ್ಟನ್ ಪ್ರೌಢಶಾಲಾ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದಲೇ ತಾನಾಗಿಯೇ ಸಾಧನೆ ಒಲಿದು ಬರಲಿದೆ. ಅಪ್ಪ-ಅಮ್ಮನ ಕೊಡುಗೆ ಅಪಾರವಿದೆ. ಅವರು ಯಾವತ್ತಿಗೂ ಸ್ವಂತ ವಿಚಾರ ಮಾಡುವುದಿಲ್ಲ. ಮಕ್ಕಳಿಗಾಗಿಯೇ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಕಲಿಸಿದ ಶಿಕ್ಷಕರು ಮತ್ತು ಬೆಳೆಸಿದ ತಂದೆ-ತಾಯಿಯನ್ನು ಎಂದಿಗೂ ಮರೆಯಬಾರದು ಎಂದರು.
ಆಕ್ಸ್‌ಫರ್ಡ್ ಕಾಲೇಜ್ ಚೇರ್ಮನ್ ವಸಂತ ಹೊರಟ್ಟಿ ಮಾತನಾಡಿ, ನಮ್ಮ ತಂದೆ ಬಸವರಾಜ ಹೊರಟ್ಟಿ ಅವರನ್ನು ಅವರ ಅವ್ವ ಬೆಳೆಸಿದರು. ರೈತ ಕುಟುಂಬದ ಕುಡಿ ರಾಜ್ಯ ಮತ್ತು ದೇಶ ಮಟ್ಟಕ್ಕೆ ಬೆಳೆದಿದ್ದಾರೆ. ನಮ್ಮ ಅಜ್ಜಿ, ನನ್ನ ಅವ್ವನ ಸಂಸ್ಕಾರ, ಸಂಸ್ಕೃತಿ ನಮ್ಮನ್ನು ಪೊರೆಯುತ್ತಿದೆ. ಜಗತ್ತು ತಾಯಿ ಮಡಿಲಲ್ಲಿದೆ. ತಾಯಿ ಮಾತನ್ನು ಯಾರೂ ತಿರಸ್ಕರಿಸಬಾರದು ಎಂದರು.
ಎಸ್‌ಜೆಎಂವಿಎಸ್ ಮಹಿಳಾ ಕಾಲೇಜ್ ಸಹಾಯಕ ಪ್ರಾಧ್ಯಾಪಕಿ ಡಾ. ಸುಪಿಯಾ ಮಲಶೆಟ್ಟಿ ಮಾತನಾಡಿ, ತಾಯಿ ತ್ಯಾಗದ ಪ್ರತೀಕ. ಮಕ್ಕಳ ಭವಿಷ್ಯಕ್ಕಾಗಿ ತನ್ನನ್ನು ತಾನು ಧಾರೆ ಎರೆಯುತ್ತಾಳೆ. ನಮ್ಮ ಗುರಿಯ ಹಿಂದೆ ತಾಯಿ ಆಶೀರ್ವಾದವಿದೆ. ಆಕೆಯ ಸಹನೆ, ಕ್ಷಮಾಗುಣ, ಸಿಟ್ಟು, ಶಿಸ್ತು, ಮಾನವೀಯ ಮೌಲ್ಯಗಳು ನಮ್ಮನ್ನು ರಕ್ಷಿಸುತ್ತವೆ ಎಂದು ಹೇಳುತ್ತ ತಮ್ಮ ತಾಯಿಯನ್ನು ನೆನೆದು ಕಣ್ಣೀರಾದರು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಜಯಶ್ರೀ ಶಿವಾನಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಯಿಯನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅಂತೆಯೇ ಬಸವರಾಜ ಹೊರಟ್ಟಿ ಅವರು ತಮ್ಮ ತಾಯಿ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಿ ಚಿರಸ್ಥಾಯಿಗೊಳಿಸಿದ್ದಾರೆ. ಟ್ರಸ್ಟ್‌ನಿಂದ ಸನ್ಮಾನ ಸ್ವೀಕರಿಸಿದ್ದಕ್ಕೆ ಅಭಾರಿಯಾಗಿದ್ದೇನೆ ಎಂದರು.
ಲ್ಯಾಮಿಂಗ್ಟನ್ ಶಾಲಾ ಸುಧಾರಣಾ ಸಮಿತಿ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸಾಪ ಜಿಲ್ಲಾ ಘಟಕದ ಪ್ರೊ.ಕೆ.ಎಸ್. ಕೌಜಲಗಿ, ಚನ್ನಬಸಪ್ಪ ಧಾರವಾಡಶೆಟ್ಟರ್ ಇತರರು ಇದ್ದರು.