ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಹಾಗೂ ಚುನಾವಣೆಯ (graduates)ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾದ ಲಿಂಗರಾಜ ಪಾಟೀಲ.
- ಈ ಬಾರಿ 1.25 ಲಕ್ಷ ಮತದಾರರ ನೋಂದಣಿ ಮಾಡಿಸುವ ಗುರಿ.
- ಮೊದಲ ಹಂತದ ನೋಂದಣಿ ಪ್ರಕ್ರಿಯೆ ನಿಧಾನವಾಗಿತ್ತು.
- ಬಹುಮತದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಮತಕ್ಷೇತ್ರ ವ್ಯಾಪ್ತಿ ಹೊಂದಿರುವ ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಇದುವರೆಗೆ 75, 539 ಜನ ಪದವೀಧರರು ನೋಂದಣಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ 26,324 ಜನ ಪದವೀಧರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಬಾರಿ ಅಂದಾಜು 72 ಸಾವಿರ ಮತದಾರರು ಇದ್ದರು. ಈ ಬಾರಿ 1.25 ಲಕ್ಷ ಮತದಾರರ ನೋಂದಣಿ ಮಾಡಿಸುವ ಗುರಿ ಇದೆ ಎಂದು ತಿಳಿಸಿದರು.
ಜಾತಿ ಗಣತಿ, ಮಾಹಿತಿ ಕೊರತೆಯಿಂದಾಗಿ ಮೊದಲ ಹಂತದ ನೋಂದಣಿ ಪ್ರಕ್ರಿಯೆ ನಿಧಾನವಾಗಿತ್ತು. ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಪದವೀಧರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಾನು ಸಹ ಈ ಚುನಾವಣೆಯ ಬಿಜೆಪಿ ಆಕಾಂಕ್ಷಿಗಳಲ್ಲಿ ಒಬ್ಬನಾಗಿದ್ದೇನೆ. ಕಳೆದ 36 ವರ್ಷಗಳಿಂದ ಪಕ್ಷದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಟಿಕೆಟ್ ಸಿಗುವ ನಿರೀಕ್ಷೆ ಇದೆ. ಟಿಕೆಟ್ ಪಡೆಯುವ ಸ್ಪರ್ಧೆಯಲ್ಲಿ ವಿಧಾನ ಪರಿಷತ್ನ ಹಾಲಿ ಶಾಸಕ ಎಸ್.ವಿ. ಸಂಕನೂರ ನನಗೆ ಪ್ರತಿಸ್ಪರ್ಧಿಯಾಗಿದ್ದಾರೆ ಎಂದರು.
ಶಾಸಕ ಎಸ್.ವಿ. ಸಂಕನೂರ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿಯೇ ಹೇಳಿದ್ದರು. ಆದರೂ, ಈ ಬಾರಿಯೂ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾಗಿದ್ದಾರೆ. ಪಕ್ಷದ ಟಿಕೆಟ್ ಯಾರೇ ಗೆದ್ದರೂ ಈ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಲಿದೆ. ಅಷ್ಟೇ ಅಲ್ಲದೇ, ಬಹುಮತದಿಂದ ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಲಿಂಗರಾಜ ಪಾಟೀಲ, ರಾಜ್ಯದ ಅಭಿವೃದ್ಧಿ ಮರೆತು ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ ಜಗಳವಾಡುತ್ತಿದ್ದಾರೆ ಎಂದು ದೂರಿದರು.
ರೈತರ ಸಮಸ್ಯೆ ನಿವಾರಣೆ ಸೇರಿದಂತೆ ಸಂಪೂರ್ಣ ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ಮರೆತಿದೆ. ಈ ಸರ್ಕಾರದ ವಿರುದ್ಧ ಬಿಜೆಪಿ ಹಂತ ಹಂತವಾಗಿ ಹೋರಾಟ ನಡೆಸಲಿದೆ. ನ. 27, 28ರಂದು ಮಂಡಳಗಳಲ್ಲಿ ಹಾಗೂ ಡಿ. 1 ಮತ್ತು 2ರಂದು ಜಿಲ್ಲಾ ಮಟ್ಟದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಬಿಜೆಪಿಯ ರವಿ ನಾಯಕ, ಪ್ರಶಾಂತ ಹಾವಣಗಿ, ಪುಂಡಲೀಕ ಅಪ್ಪನಬೈಲ್, ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಸಂಘಟಿಕ ಪ್ರೊ. ಎಸ್.ಕೆ. ಆದಪ್ಪನವರ ಸುದ್ದಿಗೋಷ್ಠಿಯಲ್ಲಿ ಇದ್ದರು.