ಅಣ್ಣಿಗೇರಿ-ಕೋಳಿವಾಡ ರಸ್ತೆಯಲ್ಲಿರುವ ಡಿ.ಬಿ. ಶಿರೂರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಳೆ ನೀರು ನಿಂತಿರುವುದು.
ಅಣ್ಣಿಗೇರಿ: ಪಟ್ಟಣದಲ್ಲಿ ಬುಧವಾರ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಪಟ್ಟಣದ ಡಿ.ಬಿ. ಶಿರೂರ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಸೋಮವಾರ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಆಚರಿಸಿ ಅದ್ದೂರಿಯಾಗಿ ಮಕ್ಕಳನ್ನು ಬರಮಾಡಿಕೊಂಡಿದ್ದ ಶಾಲೆಯ ಆವರಣ ಈಗ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.
ಬುಧವಾರ ಮಧ್ಯಾಹ್ನ ಸುರಿದ ಮಳೆಯಿಂದ ಶಾಲಾ ಆವರಣದಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮನೆಗೆ ತೆರಳಲು ಹರಸಾಹಸ ಪಟ್ಟರು. ಕೆಲ ಪಾಲಕರು ಶಾಲೆಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋದರು. ಜತೆಗೆ ಈ ಶಾಲೆ ಕಟ್ಟಡ ಹಳೆದಾಗಿರುವುದರಿಂದ ಕೊಠಡಿಗಳು ಶಿಥಿಲಗೊಂಡಿವೆ. ಮುಂಗಾರು ಪೂರ್ವದ ಮಳೆಗೇ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಹೇಗೆ ಎಂಬ ಪ್ರಶ್ನೆ ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಪ್ರತಿ ಬಾರಿ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಪಾಲಕರ ದೂರು.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕು. ಧಾರಾಕಾರ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ಬರುವ ಚರಂಡಿ ನೀರನ್ನು ಪುರಸಭೆ ಅಧಿಕಾರಿಗಳು ಈಗಲಾದರೂ ಹಳ್ಳದ ಕಡೆ ಹೋಗಲು ದಾರಿ ಮಾಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಕಾಳಿ ಮತ್ತು ಪಾಲಕರು ಆಗ್ರಹಿಸಿದ್ದಾರೆ.