ಡಾ. ಕಿರಣ್ ಮತ್ತು ಪ್ರಿಯಾಂಕಾ
ಧಾರವಾಡ: ಪತ್ನಿಯೇ ತನ್ನ ವೈದ್ಯ ಪತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನಗರದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಪತಿಯನ್ನು ಹತ್ಯೆಗೈದ ಬಳಿಕ 8 ವರ್ಷದ ಮಗನ ಮೇಲೂ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಬಾಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿದ್ದ ಡಾ. ಕಿರಣ್ ಹೊನ್ನಣ್ಣವರ (45) ಕೊಲೆಯಾದವರು. ಇವರ ಪತ್ನಿ ಪ್ರಿಯಾಂಕಾ ಹಾಗೂ ಮಗ ನೇಹಿತ್ (8) ಜತೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು.
* ಬಾಗಿಲು ಹಾಕಿಕೊಂಡು ಮನೆಯಲ್ಲೇ ಇದ್ದ ಪತ್ನಿ:
ಕೊಲೆಯಾದ ಡಾ. ಕಿರಣ್ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞವೈದ್ಯರಾಗಿದ್ದರು. ಅವರ ಪತ್ನಿ ಪ್ರಿಯಾಂಕಾ ಎಂಬಿಬಿಎಸ್ ಓದಿದ್ದು, ಗೃಹಿಣಿಯಾಗಿದ್ದರು. ಮಂಗಳವಾರ ರಾತ್ರಿಯೇ ಡಾ. ಕಿರಣ್ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಒಂದು ಕೊಠಡಿಯಲ್ಲಿ ಪತಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರೆ, ಪಕ್ಕದ ರೂಮ್ನಲ್ಲಿದ್ದ ಮಗ ನೇಹಿತ್ಗೂ ಚಾಕುವಿನಿಂದ ಇರಿದಿದ್ದಾಳೆ. ಆತನೂ ಮೃತಪಟ್ಟಿದ್ದಾನೆ ಎಂದುಕೊಂಡು ಎಂದಿನಂತೆ ಅದೇ ಕೊಠಡಿಯಲ್ಲಿ ರಾತ್ರಿ ಕಳೆದಿದ್ದಾಳೆ.
ಮೃತ ಡಾ. ಕಿರಣ್ ಸಂಬಂಧಿಕರು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕರೆ ಮಾಡಿದ್ದಾರೆ. ಕಿರಣ್ ಮೊಬೈಲ್ ಸ್ವೀಕರಿಸಿದ ಪ್ರಿಯಾಂಕಾ, "ಅವರು ಆಸ್ಪತ್ರೆಗೆ ಹೋಗಿದ್ದಾರೆ, ಹೊರಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾಳೆ. ಸಂಶಯಗೊಂಡ ಸಂಬಂಧಿಕರು ಬೆಳಗಾವಿ ಜಿಲ್ಲೆ ಸಂಕೇಶ್ವರದಿಂದ ಬುಧವಾರ ಸಂಜೆ 7ರ ಸುಮಾರಿಗೆ ಅಪಾರ್ಟ್ಮೆಂಟ್ಗೆ ಬಂದಿದ್ದಾರೆ. ಕೆಲಹೊತ್ತು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಮನೆಯ ಬಾಗಿಲು ತೆರೆಸಿದ್ದಾರೆ. ಒಳಗೆ ನೋಡಿದಾಗ ಡಾ. ಕಿರಣ್ ರಕ್ತದ ಮಡುವಿನಲ್ಲಿ ಕೊಲೆಯಾಗಿದ್ದರು. ಮತ್ತೊಂದು ರೂಮ್ನಲ್ಲಿ ಅವರ ಮಗ ನೇಹಿತ್ ಕೂಡ ಗಾಯಗೊಂಡು ಬಿದ್ದಿದ್ದ. ಮನೆಯಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ಆರೋಪಿ ಪ್ರಿಯಾಂಕಾ ಮೊಬೈಲ್ ನೋಡುತ್ತ ಅತ್ತಿತ್ತ ಓಡಾಡುತ್ತಿದ್ದಳು. ಬಾಲಕನ ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆಯಲಾಗಿದೆ.
"
ಡಾ. ಕಿರಣ್ ಸಂಬಂಧಿಕರು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆಯಿಂದ ಕರೆ ಮಾಡಿದಾಗ ಆರೋಪಿ ಪ್ರಿಯಾಂಕಾ ಸುಳ್ಳು ಹೇಳಿದ್ದಾರೆ. ಇದರಿಂದ ಸಂಶಯಗೊಂಡ ಸಂಬಂಧಿಕರು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.
— ಎನ್. ಶಶಿಕುಮಾರ್, ಹುಧಾ ಪೊಲೀಸ್ ಆಯುಕ್ತ