ಕನ್ನಡಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ' ಗೋಷ್ಠಿ 
ಧಾರವಾಡ

`ಜಯದೇವಿ ತಾಯಿ ಲಿಗಾಡೆ' ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿ

ಧಾರವಾಡ: ಶಿಕ್ಷಣಕ್ಕಾಗಿ ಕನ್ನಡ ಶಾಲೆಗಳನ್ನು ಸ್ಥಾಪಿಸುವ ಹಾಗೂ ಇಡೀ ಕನ್ನಡ ನಾಡಿನಲ್ಲಿ ಸಾಕ್ಷರತೆ ಹರಡುವ ಕಾರ್ಯ ಮಾಡಿದ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ರಾಜ್ಯದ್ಯಂತ ಸರ್ಕಾರಿ ಶಾಲೆಗಳಿಗೆ ಅವರ ಹೆಸರು ನಾಮಕರಣ ಮಾಡಿ...
ಇದು ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಲ್ಲಾಪುರದಲ್ಲಿ ಆಯೋಜಿಸಿರುವ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಧಿಗಳ 10ನೇ ಮಹಾಮೇಳದಲ್ಲಿ `ಕನ್ನಡಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ' ಗೋಷ್ಠಿಯಲ್ಲಿ ವಿಷಯ ಮಂಡನೆಕಾರರು ಒತ್ತಾಯಿಸಿದರು.
ಜಯದೇವಿ ತಾಯಿ ಲಿಗಾಡೆ ಮರಾಠಿ ಪ್ರಭಾವಿತ ಪ್ರದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನ ಅವರನ್ನು ಅಪ್ಪಟ ಕನ್ನಡತಿಯನ್ನಾಗಿಸಿದೆ. 1952ರಲ್ಲಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರೂ ಆಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಓರ್ವ ಮಹಿಳೆಗೆ ಪ್ರತಿ ವರ್ಷ `ಜಯದೇವಿ ತಾಯಿ ಲಿಗಾಡೆ' ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಸರ್ಕಾರಿ ಶಾಲೆಗಳಿಗೆ ಅವರ ಹೆಸರುಗಳನ್ನು ನಾಮಕರಣ ಮಾಡಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ಗೋಷ್ಠಿಯ ವಿಷಯ ಮಂಡನೆಕಾರರು ವಿದ್ಯಾವರ್ಧಕ ಸಂಘಕ್ಕೆ ಮನವಿ ಮಾಡಿದರು.
ಚಿಂತಕ ರಾಮಕೃಷ್ಣ ಮರಾಠೆ ಅವರು ಮಾತನಾಡಿ, ಜಯದೇವಿತಾಯಿ ಲಿಗಾಡೆ 1912ರಲ್ಲಿ ಸೋಲಾಪುರದಲ್ಲಿ ಜನಿಸಿದರು. ಮರಾಠಿ ಮಾತೃಭಾಷೆಯಾದರೂ ಕನ್ನಡಕ್ಕಾಗಿ ಅನಿಯಮಿತ ಕೆಲಸ ಮಾಡಿದ್ದಾರೆ. ಅಖಂಡ ಕರ್ನಾಟಕಕ್ಕಾಗಿ ಪ್ರಾಣ ನೀಡಿದವರು ಅವರು. ಸೋಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ವಾದವನ್ನು ಆಧಾರ ಸಮೇತ ಮಂಡಿಸಿದವರು. ಏಕೀಕರಣ ಚಳುವಳಿ ಮಾಡಿದವರು ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಯದೇವಿ ತಾಯಿ ಲಿಗಾಡೆ ಸೊಸೆ ಮಧುಮಾಲಾ ಲಿಗಾಡೆ ಮಾತನಾಡಿ, ಜಯದೇವಿ ತಾಯಿಯವರು ನನಗೆ ಎಂದಿಗೂ ಅತ್ತೆಯಾಗಿರಲಿಲ್ಲ. ಅವರ ನನ್ನ ನಡುವೆ ಗುರುಶಿಷ್ಯರ ಸಂಬAಧವಿತ್ತು. ಅವರ ಕನ್ನಡ ನಾಡು-ನುಡಿ, ಶಿಕ್ಷಣ, ಸಾಮಾಜಿಕ ಸೇವೆ ಅನುಕರಣಿಯವಾಗಿತ್ತು ಎಂದರು.
ಇದಕ್ಕೂ ಮುಂಚೆ ನಡೆದ ಮರಾಠಿ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆ ಗೋಷ್ಠಿಯಲ್ಲಿ ಕ.ವಿ.ವ.ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗುರುಸಿದ್ದಯ್ಯಸ್ವಾಮಿ ವಿಷಯ ಮಂಡಿಸಿದರು.
ಕ.ವಿ.ವ. ಸಂಘದ ಕಾ.ಕಾ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ ಗೋಷ್ಠಿ ನಿರ್ವಹಿಸಿದರು. ಇದೇ ವೇಳೆ ಸೋಲ್ಲಾಪುರದ ಕನ್ನಡ ಪತ್ರಕರ್ತರಾದ ಶಿವಾನಂದ ಗೋಗಾಂವ ಹಾಗೂ ರಮೇಶ ನಾಯಕ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ರತಿಕಾ ನೃತ್ಯ ನಿಕೇತನದ ವಿದ್ಯಾರ್ಥಿಗಳು ವಚನ ನೃತ್ಯ ಪ್ರದರ್ಶಿಸಿದರು. ಮುಗಳಿಯ ಬಸವರಾಜ ಗೊಬ್ಬಿ ಹಾಗೂ ತಂಡದವರಿAದ ಜನಪದ ನೃತ್ಯ ಹಾಡುಗಳು, ಕೊಲ್ಹಾಪುರ ಕೆ.ಡಿ.ಸಿ. ಡಾನ್ಸ್ ಅಕಾಡೆಮಿ ಅವರು ಲಾವಣಿ ನೃತ್ಯ ಸೇರಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನ ತಣಿಸಿದವು.