ಭಾರತದ ರಕ್ಷಣಾ ವ್ಯವಸ್ಥೆ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್. ವೀಕ್ಷಿಸಿದರು.
ಧಾರವಾಡ: ವಿದ್ಯಾರ್ಥಿಗಳು ದೇಶಸೇವೆ ಗುರಿಯನ್ನಾಗಿ ಮಾಡಿಕೊಳ್ಳಬೇಕು. ಭಾರತೀಯ ಸೇನೆ, ಪೊಲೀಸ್ ಇಲಾಖೆ ಅಥವಾ ವಿವಿಧ ಸಶಸ್ತç ಪಡೆಗಳಿಗೆ ಸೇರಲು ಸದಾ ಉತ್ಸುಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಕರೆ ನೀಡಿದರು.
ಕರ್ನಾಟಕ ಎಜ್ಯುಕೇಶನ್ ಬೋರ್ಡ್ ಹಾಗೂ ಮಾಳಮಡ್ಡಿ ಸಂಕೀರ್ಣದ ವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಭಾರತದ ರಕ್ಷಣಾ ವ್ಯವಸ್ಥೆ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಈ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಿಗೆ ಸಶಸ್ತ್ರ ಪಡೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಮೂಡಿಸುತ್ತದೆ. ಜತೆಗೆ ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳು ದೇಶ ಸೇವೆಗೆ ಮುಂದಾಗಬೇಕು. ದೇಶದ ಪ್ರಗತಿ, ಭದ್ರತೆ ಮತ್ತು ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಬ್ರಿಗೇಡಿಯರ್ ಎಸ್.ಜಿ. ಭಾಗವತ್ ಮಾತನಾಡಿ, ಭಾರತ ಇತರ ದೇಶಗಳ ಮೇಲೆ ರಕ್ಷಣಾ ಸಾಮಗ್ರಿಗಳಿಗಾಗಿ ಅವಲಂಬಿತವಾಗಿದ್ದ ಕಾಲದಿಂದ ಇಂದು ಕ್ಷಿಪಣಿಗಳನ್ನು ರಫ್ತು ಮಾಡುವ ಹಂತಕ್ಕೆ ದೇಶ ಬೆಳೆದಿದೆ. ಯುವಜನರಲ್ಲಿ ಅಶಿಸ್ತು ಕಡಿಮೆಯಾಗಬೇಕು. ಪ್ರತಿಯೊಬ್ಬರು ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರದ ಪ್ರಗತಿಗೆ ತಮ್ಮದೇ ಕೊಡುಗೆ ನೀಡಬೇಕು ಎಂದರು.
ಏರ್ ಕಮಡೋರ್ ಸಿ.ಎಸ್. ಹವಾಲ್ದಾರ್, ಕಮಡೋರ್ ಅರವಿಂದ ಶಿಗ್ಗಾಂವ, 24 ಕರ್ನಾಟಕ ಬೆಟಾಲಿಯನ್ ಮತ್ತು ಎನ್‌ಸಿಸಿ ಕಮಾಂಡಿಂಗ್ ಆಫೀಸರ್, ಕರ್ನಲ್ ಅನುಪ ರಾಲೇಗಾಂವಕರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್ ಅಧ್ಯಕ್ಷ ಮಹಾದೇವ ಜೋಶಿ ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
350 ವಿದ್ಯಾರ್ಥಿಗಳು ನೌಕಾದಳ, ವಾಯುದಳ, ಭೂದಳ, ರೆಜಿಮೆಂಟ್‌ಗಳು ಮತ್ತು ಬಿಎಸ್‌ಎಫ್ ಗೆ ಸಂಬಂಧಿಸಿದ ವಸ್ತು ಪ್ರದರ್ಶನದ ಮಾದರಿಗಳನ್ನು ಪ್ರದರ್ಶಿಸಿದರು. ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಪಾಲಕರು ಹಾಗೂ ಸಾರ್ವಜನಿಕರು ವೀಕ್ಷಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಅಶೋಕ ನಾಗಸಮುದ್ರ, 24 ಕರ್ನಾಟಕ ಬೆಟಾಲಿಯನ್ ಎಡಿಎಂ ವೈ.ಎಸ್. ರಾಣಾವತ್ ಇತರರಿದ್ದರು. ಸಂಸ್ಥೆಯ ಕಾರ್ಯಾದ್ಯಕ್ಷ ಶ್ರೀಕಾಂತ ಪಾಟೀಲ ಪರಿಚಯಿಸಿದರು. ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಲ್. ಶೇಖರಗೋಳ ನಿರೂಪಿಸಿದರು. ಪ್ರಾಚಾರ್ಯೆ ಡಾ. ಸುನೀತಾ ಕಡಪಟ್ಟಿ ವಂದಿಸಿದರು.