ಹುಬ್ಬಳ್ಳಿಯ ಕೇಂದ್ರ ಕಾರಾಗೃಹಕ್ಕೆ ಕಾರಾಗೃಹದ ಡಿಜಿಪಿ ಅಲೋಕ ಕುಮಾರ್ (alokkumar)ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಹುಬ್ಬಳ್ಳಿ: ರಾಜ್ಯಾದ್ಯಂತ ಜೈಲುಗಳಲ್ಲಿರುವ ಕೈದಿಗಳ ಎನ್‌ಡಿಪಿಎಸ್ ಪರೀಕ್ಷೆ ಮಾಡಲು ನಿರ್ಧರಿಸಿದ್ದು, ವಾರದೊಳಗೆ ಆರಂಭಿಸಲಾಗುವುದು. ಬಹುತೇಕ ಕೈದಿಗಳು ಜೈಲಿನಲ್ಲಿ ಗಾಂಜಾ ವ್ಯಸನಿಗಳಾಗಿರುತ್ತಾರೆ. ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದು ಕಾರಾಗೃಹದ ಡಿಜಿಪಿ ಅಲೋಕ ಕುಮಾರ್ (alokkumar) ತಿಳಿಸಿದರು.
ಇಲ್ಲಿಯ ಅಶೋಕನಗರದ ಕೇಂದ್ರ ಕಾರಾಗೃಹಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜೈಲಿನಲ್ಲಿ ಗಾಂಜಾ ಸೇವನೆ ಹಾಗೂ ಮೊಬೈಲ್ ಫೋನ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಿಸ್ತು ಹಾಗೂ ನಿಯಮಗಳನ್ನು ಜೈಲಿನಲ್ಲಿರುವ ಕೈದಿಗಳು ಕಡ್ಡಾಯವಾಗಿ ಪಾಲಿಸಬೇಕು. ಜೈಲಿನಿಂದ ಹೊರ ಹೋಗುವಾಗ ಉತ್ತಮ ನಾಗರಿಕರಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹುಬ್ಬಳ್ಳಿ ಕಾರಾಗೃಹದಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಕಳವು ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾದ 132 ಕೈದಿಗಳಿದ್ದಾರೆ. ಅವರಿಗೆ ಜೈಲಿನಲ್ಲಿ ಯೋಗ, ಧ್ಯಾನ ಕಲಿಸಲಾಗುತ್ತಿದೆ. ಜೈಲಿನಿಂದ ಹೊರಗೆ ಬಂದ ಬಳಿಕ ಅಪರಾಧ ಕೃತ್ಯದಲ್ಲಿ ತೊಡಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್‌ಗೆ ಸಂಬಂಧಿಸಿದ ಕೌಶಲಾಧಾರಿತ ತರಬೇತಿ ನೀಡಲಾಗುತ್ತಿದೆ. ಜೈಲಿನಿಂದ ಹೊರ ಬಂದ ಮೇಲೆ ಅವರು ಜೀವನ ಸುಂದರವಾಗಿರಲು ಅನುಕೂಲವಾಗಲಿದೆ. ಯುವ ಕೈದಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇನ್ನಿತರ ಕೈದಿಗಳ ಸಂಪರ್ಕಕ್ಕೆ ಅವರು ಬಾರದಂತೆ ಕ್ರಮ ಕೈಗೊಳ್ಳಲಾಗಿದೆ. ಕಾರಾಗೃಹ ಪರಿಶೀಲನೆ ವೇಳೆ ಯಾವುದೇ ವಸ್ತುಗಳು ದೊರೆಕಿಲ್ಲ. ಈ ಮೊದಲು ಮೊಬೈಲ್ ಫೋನ್ ಬಳಖೆ ನಡೆಯುತ್ತಿತ್ತು. ಈಗಾಗಲೇ ಬಹಳಷ್ಟು ಕಡೆ ಕಡಿವಾಣ ಹಾಕಿದ್ದು, ಮುಂದೆಯೂ ಸೂಕ್ತ ಕ್ರಮ ಕೈಗೊಳ್ಳಲು ಜೈಲರ್‌ಗಳಿಗೆ ಸೂಚಿಸಲಾಗಿದೆ ಎಂದರು.
ಎಸಿಪಿ ಶಿವಾನಂದ ಚಲವಾದಿ ಇತರರು ಇದ್ದರು.