economic ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಹುಬ್ಬಳ್ಳಿಯಲ್ಲಿ ಏರ್ಪಡಿಸಿರುವ ಇನ್ಕಾಮೆಕ್ಸ್ನಲ್ಲಿ ಮೂರನೇ ದಿನವಾದ ಸೋಮವಾರ ಕೃಷಿ ವಿಚಾರ ಸಂಕಿರಣವನ್ನು ಕರ್ನಾಟಕ ಕೃಷಿ ಉತ್ಪನ್ನಗಳ ಬೆಲೆ ಆಯೋಗದ ಚೇರ್ಮನ್ ಡಾ. ಅಶೋಕ ದಳವಾಯಿ ಉದ್ಘಾಟಿಸಿದರು.
ಕರ್ನಾಟಕ ವಾಣಿಜೊ್ಯೕದ್ಯಮ ಸಂಸ್ಥೆಯ ವತಿಯಿಂದ ಇಲ್ಲಿನ ಅಮರಗೋಳ ಎಪಿಎಂಸಿ ಯಾರ್ಡ್ನ ಹುಬ್ಬಳ್ಳಿ-ಧಾರವಾಡ ವಿವಿದೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಇನ್ಕಾಮೆಕ್ಸ್ 2026ರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರವು ಹೊಸ ಆದಾಯ ಮತ್ತು ಉದ್ಯೋಗ ಸೃಷ್ಟಿಸುವ ರಂಗ ಆಗಬೇಕಿದೆ. ಇದಕ್ಕಾಗಿ ಹೊಸ ವಿಚಾರ ಬೇಕು. ಆಹಾರ ಸಂಸ್ಕರಣೆ ಬದಲಾಗಿ ಕೃಷಿ ಸಂಸ್ಕರಣೆ ಆಗಬೇಕಿದೆ. ಭಾರತೀಯರಾದ ನಮಗೆ ಸಾಕಷ್ಟು ಆಹಾರ ಭದ್ರತೆ ಇದೆ.
ಆದರೂ, ನಮ್ಮ ಪರಿಸ್ಥಿತಿ ಆರೋಗ್ಯಕರವಾಗಿಲ್ಲ. ಜನ ಇನ್ನೂ ಹಸಿವಿನಿಂದ ಬಳಲುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಭದ್ರತೆ ಒದಗಿಸುವುದು ಸವಾಲಾಗಲಿದೆ. ಪ್ರತಿ ಹೆಕ್ಟೇರ್ ಇಳುವರಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅದನ್ನು ಹೇಗೆ ಹೆಚ್ಚಿಸಿಬೇಕೆಂಬ ಚಿಂತನೆ ನಡೆಯುತ್ತಿಲ್ಲ.
ಇರುವ ಜಮೀನನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಸವಾಲಾಗಿ ಪರಿಣಮಿಸಿದೆ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ರೈತರು ಹೆಚ್ಚು ಇಳುವರಿ ತೆಗೆಯುವ ಜತೆಗೆ ಗುಣಮಟ್ಟದ ಕಡೆಗೂ ಗಮನ ಹರಿಸಬೇಕು. ವಿದೇಶ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವಂತಾಗಬೇಕು.
ಕೈಗಾರಿಕೆಗಳೊಂದಿಗೆ ಕೈ ಜೋಡಿಸಿ, ಅಗತ್ಯ ಇರುವ ಕೃಷಿ ಉತ್ಪನ್ನಗಳನ್ನು ಒದಗಿಸಬೇಕು. ಅಂದಾಗ, ರೈತರು ಸಹ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಾಣಿಜ್ಯೊದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಯುವಕರನ್ನು ಕೃಷಿಯತ್ತ ಆಕರ್ಷಿಸಬೇಕಿದೆ. ರೈತರ ಶ್ರಮಕ್ಕೆ ಮೌಲ್ಯ ಸಿಗಬೇಕಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ರೈತರು ತಮ್ಮ ಉತ್ಪಾದನೆಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ರೈತರು ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಬಳಸಿ, ಬೆಳೆ ಬೆಳೆಯುತ್ತಿದ್ದಾರೆ. ಅವರ ಬೆಳೆಗಳಿಗೆ ತಕ್ಕ ಬೆಲೆ ಸಿಗಬೇಕು ಎಂದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಸಿ.ಹಿರೇಮಠ, ಇನ್ ಕಾಮೆಕ್ಸ್ ಚೇರ್ಮನ್ ಮಹಾದೇವ ಕರಮರಿ, ಉಪಾಧ್ಯಕ್ಷ ಪ್ರವೀಣ ಅಗಡಿ, ಸಿದ್ಧೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಜಯಪ್ರಕಾಶ ಟೆಂಗಿನಕಾಯಿ, ಶಶಿಧರ ಶೆಟ್ಟರ, ಮಹೇಂದ್ರ ಲದ್ಧಡ, ವಸಂತ ಲದ್ವಾ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಡಿ.ಡಿ. ಪಾಟೀಲ, ಇತರರು ಇದ್ದರು.