ರಾಜ್ಯದಲ್ಲಿ ಜೂನ್ 30ರಿಂದ (Against SIR) ಆರಂಭವಾಗುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಉದ್ಭವಿಸಬಹುದಾದ ಮತದಾರರ ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಿಪಿಐ(ಎಂ), ಸಿಪಿಐ ಹಾಗೂ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದವು. 
ಧಾರವಾಡ

ಪ್ರತಿಯೊಬ್ಬರ (Against SIR) ಮತದಾನದ ಹಕ್ಕನ್ನು ರಕ್ಷಿಸಿ

ಸಂತೋಷ ವೈದ್ಯ
ಹುಬ್ಬಳ್ಳಿ: ರಾಜ್ಯದಲ್ಲಿ ಜೂನ್ 30ರಿಂದ Against SIR) ಎಸ್​ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಆರಂಭವಾಗಲಿದ್ದು ವಾಸ್ತವದಲ್ಲಿ ಉದ್ಭವಿಸಬಹುದಾದ ಮತದಾರರ ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಿಪಿಐ(ಎಂ), ಸಿಪಿಐ ಹಾಗೂ ಜನಪರ ಸಂಘಟನೆಗಳು ಇಂದು ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದವು.
ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕು ರಕ್ಷಿಸಬೇಕು. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯದಂತೆ ಅಗತ್ಯ ಕ್ರಮವಹಿಸಬೇಕು. ಯಾರಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನೂ ಒದಗಿಸಲು ಸಾಧ್ಯವಿಲ್ಲವೋ ಅಂತಹವರಿಗೆ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಖಾಯಂ ವಾಸ ದೃಢೀಕರಣ ಪತ್ರ, ಇತ್ಯಾದಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮಗಳನ್ನು ಸರಳಗೊಳಿಸಿ, ಸುಲಭವಾಗಿ ಮತ್ತು ಶೀಘ್ರವಾಗಿ ದಾಖಲೆಗಳನ್ನು ರಾಜ್ಯ ಸರ್ಕಾರವೇ ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೆಸರುಗಳ ಉಪನಾಮ, ಇನಿಷಿಯಲ್ ವ್ಯತ್ಯಾಸಗಳು, ವಯಸ್ಸಿನ ಅಂತರ ಕಡಿಮೆ ಅಥವಾ ಹೆಚ್ಚಿದೆಯೆಂದು, ಮಕ್ಕಳ ಸಂಖ್ಯೆ ಹೆಚ್ಚಿದೆಯೆಂದು ಅಂಥವರನ್ನು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಚುನಾವಣಾ ಆಯೋಗಕ್ಕೆ ಕೋರಬೇಕು. ಮತದಾರರ ಪಟ್ಟಿಯನ್ನು ಕಂಪ್ಯೂಟರ್ ಓದಬಲ್ಲ ಮಾದರಿಯಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು. ರಾಜ್ಯ ಸರ್ಕಾರತನ್ನ ಆಡಳಿತ ಯಂತ್ರ ಬಳಸಿ ಹಾಗೂ ಬಿಎಲ್​ಓಗಳ ಸಹಾಯದಿಂದ ಪ್ರತಿ ವಾರ್ಡ್/ಪಂಚಾಯಿತಿಯಲ್ಲಿ ‘ಮತದಾರರ ಸೇವಾ ಕೇಂದ್ರ’ಗಳನ್ನು ತೆರೆದು ಜನರಿಗೆ ಅಗತ್ಯ ನೆರವು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾ ಮುಖಂಡ ಬಿ.ಎ. ಮುಧೋಳ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಎಸ್. ಸೊಪ್ಪಿನ, ಬಿ.ಎನ್. ಪೂಜಾರಿ, ಬಾಬಾಜಾನ ಮುಧೋಳ, ಇತರರು ಇದ್ದರು.