ರೈಸಿಂಗ್​ ಅಡ್ವೆಂಚರ್​ ವಾಟರ್​ ಪಾರ್ಕ್​ ಉದ್ಘಾಟನೆ 
ಧಾರವಾಡ

ಸದೃಢ ಆರೋಗ್ಯಕ್ಕೆ ಅಡ್ವೆಂಚರ್​ ಪಾರ್ಕ್​ಗಳು ಅವಶ್ಯಕ

ಧಾರವಾಡ: ದೈನಂದಿನ ಒತ್ತಡದ ಬದುಕಿಗೆ ಚೈತನ್ಯ ನೀಡುವ ಅಡ್ವೆಂಚರ್​ ವಾಟರ್​ ಪಾರ್ಕ್​ಗಳು ಇಂದಿನ ಅಗತ್ಯವಾಗಿವೆ ಎಂದು ಧಾರವಾಡ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ಚಿಕ್ಕಮಲ್ಲಿಗವಾಡ ಸಮೀಪದ ರೈಸಿಂಗ್​ ಡೆವಲಪರ್ಸ್​ ಸಂಸ್ಥೆಯವರು ಸಿದ್ಧಗೊಳಿಸಿದ ರೈಸಿಂಗ್​ ಅಡ್ವೆಂಚರ್​ ವಾಟರ್​ ಪಾರ್ಕ್​ ಉದ್ಘಾಟಿಸಿ ಅವರು ಮಾತನಾಡಿದರು.
ಈಜು ಉತ್ತಮ ವ್ಯಾಯಾಮಗಳಲ್ಲಿ ಒಂದು. ಅದು ದೇಹದ ಸರ್ವಾಂಗಕ್ಕೂ ಚೈತನ್ಯ ತುಂಬುವ ಮಹತ್ವದ ಕ್ರೀಡೆ. ಇದರಿಂದ ಹೃದಯ ಸಂಬಂಧಿ ರೋಗಗಳು ದೂರವಾಗುತ್ತವೆ. ಧಾರವಾಡದ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ತೇಜಸ್ವಿ ಕಟ್ಟೀಮನಿ ಮಾತನಾಡಿ, ಆರೋಗ್ಯವೇ ಭಾಗ್ಯ ವಾಗಬೇಕಾದರೆ ಇಂಥ ಪಾರ್ಕ್​ಗಳು ಹೆಚ್ಚು ಸ್ಥಾಪನೆಯಾಗಬೇಕು. ರಜಾದಿನಗಳಲ್ಲಿ ಮಕ್ಕಳಿಗೆ, ಪಾಲಕರಿಗೆ ಆರೋಗ್ಯ ವೃದ್ಧಿಸಲು ವಾಟರ್​ ಪಾರ್ಕ್​ಗಳ ಅಗತ್ಯ ಬಹಳವಿದೆ ಎಂದರು.
ಅಡ್ವೆಂಚರ್​ ವಾಟರ್​ ಪಾರ್ಕ್​ನ ಮಾಲಿಕರಾದ ಡಾ. ರಮೇಶ ಇಡಗಲ್ಲ ಮತ್ತು ಶಿಲ್ಪಾ ಇಡಗಲ್ಲ ದಂಪತಿಯನ್ನು ಸತ್ಕರಿಸಲಾಯಿತು.
ವಿಜಯಪುರದ ಡಾ. ಅಶೋಕ ಸಾಸನೂರ ಅಧ್ಯಕ್ಷತೆ ವಹಿಸಿದ್ದರು.ಡಾ. ರಮೇಶ ಚೌಧರಿ ವೇದಿಕೆಯಲ್ಲಿದ್ದರು.