grain ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
- ಸಿಎಂಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪತ್ರ
- ಮಳೆಯ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಅನ್ನದಾತರು
- ರೈತರಿಗೆ ಸುಮಾರು 87 ಲಕ್ಷ ರೂ. ಭಾರಿ ನಷ್ಟ ಸಂಭವಿಸಿದೆ
ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಕಿರೇಸೂರ ಹಾಗೂ ಅಮರಗೋಳ ಗ್ರಾಮಗಳ ಅಂದಾಜು 95 ರೈತರು (ಕಳೆದ ವರ್ಷ) 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ತಮ್ಮ ಹೆಸರುಕಾಳನ್ನು ಬ್ಯಾಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಅಮರಗೋಳದ ಟಿಎಪಿಸಿಎಂಎಸ್ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿದ್ದರು.
ರೈತರಿಂದ ಅಂದಾಜು 1,981 ಚೀಲಗಳಷ್ಟು (990 ಕ್ವಿಂಟಲ್) ಹೆಸರು ಕಾಳನ್ನು ಖರೀದಿಸಿದ 21 ದಿನಗಳ ನಂತರ, ಅದು ಎಫ್.ಎ.ಕ್ಯೂ ಗುಣಮಟ್ಟಕ್ಕೆ ಹೊಂದುತ್ತಿಲ್ಲ ಎಂಬ ನೆಪವೊಡ್ಡಿ ಖರೀದಿ ಕೇಂದ್ರಗಳು ವಾಪಸ್ ನೀಡಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಪತ್ರದಲ್ಲಿ ತಿಳಿಸಿದ್ದಾರೆ.
ಮಳೆಯ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಅನ್ನದಾತರು, ಅಧಿಕಾರಿಗಳ ಮತ್ತು ಖರೀದಿ ಕೇಂದ್ರಗಳ ಈ ದಿಢೀರ್ ಕ್ರಮದಿಂದಾಗಿ ತೀವ್ರ ಆರ್ಥಿಕ ನಷ್ಟ ಹಾಗೂ ಮಾನಸಿಕ ಆತಂಕಕ್ಕೆ ಒಳಗಾಗಿದ್ದಾರೆ.
ಈ ಅನ್ಯಾಯದ ವಿರುದ್ಧ ರೈತರು ಕಳೆದ 15 ದಿನಗಳಿಗೂ ಹೆಚ್ಚು ಕಾಲದಿಂದ ಹುಬ್ಬಳ್ಳಿಯ ವಿಕಾಸನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಹಾಗೂ ಸಹಕಾರ ಮಾರಾಟ ಮಹಾಮಂಡಳದ ಜಂಟಿ ಪರಿಶೀಲನಾ ವರದಿಗಳ ಪ್ರಕಾರ, ಗುಣಮಟ್ಟ ಪರಿಶೀಲನೆ ಪ್ರಕ್ರಿಯೆಯಲ್ಲಿ ಉಂಟಾದ ಗೊಂದಲ ಹಾಗೂ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಅಂದಾಜು 992 ಚೀಲಗಳಷ್ಟು ಹೆಸರುಕಾಳು ತಿರಸ್ಕೃತಗೊಂಡಿವೆ.
ಇದರಿಂದ ರೈತರಿಗೆ ಸುಮಾರು 87 ಲಕ್ಷ ರೂ. ಭಾರಿ ನಷ್ಟ ಸಂಭವಿಸಿದೆ ಎಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ. ಅಧಿಕಾರಿಗಳ ತಪ್ಪಿಗೆ ರೈತರನ್ನು ಹೊಣೆಗಾರರನ್ನಾಗಿ ಮಾಡಿರುವುದು ಖಂಡನೀಯ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಳೆಯ ಪೂರ್ವ ನಿದರ್ಶನದಂತೆ ಪರಿಹಾರ ನೀಡಿ: ಇದೇ ರೀತಿಯ ಸಮಸ್ಯೆ 2021-22ನೇ ಸಾಲಿನಲ್ಲಿ ಬಾಗಲಕೋಟೆ, ಹುನಗುಂದ ಮತ್ತು ಇಳಕಲ್ ತಾಲೂಕುಗಳ ರೈತರಿಗೂ ಎದುರಾಗಿತ್ತು.
ಆಗ ರಾಜ್ಯ ಸರ್ಕಾರವು ತಕ್ಷಣವೇ ಸ್ಪಂಧಿಸಿ, ರೈತರ ಸೊಸೈಟಿಗಳಲ್ಲಿ ದಾಸ್ತಾನು ಮಾಡಿದ್ದ 18,300 ಕ್ವಿಂಟಲ್ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ಗೆ 500 ರೂ.ಗಳಂತೆ ಒಟ್ಟು 90 ಲಕ್ಷ ರೂ. ಪರಿಹಾರ ಮೊತ್ತವನ್ನು ಆವರ್ತ ನಿಧಿಯಿಂದ 25.11.2022ರ ಆದೇಶದ ಮೂಲಕ ಬಿಡುಗಡೆ ಮಾಡಿ ರೈತರ ಕೈ ಹಿಡಿದಿತ್ತು.
ಅದೇ ಮಾದರಿಯಲ್ಲಿ ಈಗ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಮತ್ತು ಸುತ್ತಲಿನ ಗ್ರಾಮಗಳ ನೊಂದ ರೈತರಿಗೂ ಪ್ರತಿ ಕ್ವಿಂಟಲ್ಗೆ ಸೂಕ್ತ ಪರಿಹಾರವನ್ನು ಆವರ್ತ ನಿಧಿಯ ಮೂಲಕ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆ ಮೂಲಕ ಅನ್ನದಾತರ ಧರಣಿ ಸತ್ಯಾಗ್ರಹ ಶಾಂತಿಯುತವಾಗಿ ಅಂತ್ಯಗೊಳ್ಳಲು ಮತ್ತು ಅವರಿಗೆ ನ್ಯಾಯಯುತ ಪರಿಹಾರ ಶೀಘ್ರವಾಗಿ ಸಿಗುವಂತೆ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕೆಂದು ಸಚಿವ ಪ್ರಲ್ಹಾದ ಜೋಶಿ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.