ಕುಂದಗೋಳ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ (hostel) ಬುಧವಾರ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭಾ, ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
- ಕುಂದಗೋಳ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ಗೆ ಅಧಿಕಾರಿಗಳು ಭೇಟಿ
- ಚರ್ಮರೋಗದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ
- ಹಾಸ್ಟೆಲ್ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ವಾರ್ಡನ್‌ಗೆ ಕಟ್ಟುನಿಟ್ಟಿನ ಸೂಚನೆ
ಕುಂದಗೋಳ: ಅವ್ಯವಸ್ಥೆಯ ಆಗರವಾಗಿರುವ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ (Hostel) ಶುದ್ಧೀಕರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮುಖ್ಯವಾಗಿ ಚರ್ಮರೋಗದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ಬುಧವಾರ ವೈದ್ಯರ ತಂಡ ತಪಾಸಣೆ ನಡೆಸಿ ಅಗತ್ಯ ಔಷಧೋಪಚಾರ ನೀಡಿದ್ದಾರೆ.
ಕಲುಷಿತ ನೀರಿನ ಪರಿಣಾಮ ಹಾಸ್ಟೆಲ್‌ನಲ್ಲಿರುವ 55 ಮಕ್ಕಳ ಪೈಕಿ 20 ವಿದ್ಯಾರ್ಥಿಗಳಿಗೆ ದೇಹದ ವಿವಿಧ ಭಾಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡು ತೀವ್ರ ತೊಂದರೆ ಅನುಭವಿಸುತ್ತಿದ್ದರು. ವಿಪರ್ಯಾಸವೆಂದರೆ ಕಳೆದ 45
ದಿನಗಳಿಂದಲೂ ಈ ಸಮಸ್ಯೆ ಕಾಡುತ್ತಿದ್ದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ, ಕೆಲ ಪಾಲಕರಂತೂ ತಮ್ಮ ಮಕ್ಕಳನ್ನು ಮನೆಗೆಕರೆದುಕೊಂಡು ಹೋಗಲು ಮುಂದಾಗಿದ್ದರು.
ಮಕ್ಕಳು ಅನುಭವಿಸುತ್ತಿರುವ ಸಂಕಷ್ಟ ಹಾಗೂ ದುರ್ನಾತ ಬೀರುತ್ತಿರುವ ಹಾಸ್ಟೆಲ್‌ನ ವಾತಾವರಣ ಕುರಿತು ‘ವಿಜಯವಾಣಿ’ಯಲ್ಲಿ ‘ಕುಂದಗೋಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ! ಕೆಲವು ವಿದ್ಯಾರ್ಥಿಗಳಿಗೆ ಚರ್ಮಬಾಧೆ’ ಶೀರ್ಷಿಕೆಯಡಿ ಬುಧವಾರ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.
ವರದಿಗೆ ತಕ್ಷಣವೇ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭಾ, ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ ಮೌನೇಶ್ವರ ಪ್ಲಾಟ್‌ನಲ್ಲಿರುವ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸ್ಟೆಲ್‌ನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಮಕ್ಕಳ ಆರೋಗ್ಯ ತಪಾಸಣೆ...
ವಸತಿ ನಿಲಯದಲ್ಲಿರುವ 20 ಮಕ್ಕಳಿಗೆ ಚರ್ಮರೋಗ ಕಾಣಿಸಿಕೊಂಡಿದ್ದರಿಂದ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಗೊಡ್ಡೆಮ್ಮಿಯವರ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ತಂಡ ಹಾಸ್ಟೆಲ್‌ಗೆ ಭೇಟಿ ನಿಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು.
ವಾರ್ಡನ್‌ಗೆ ಕಟ್ಟುನಿಟ್ಟಿನ ಸೂಚನೆ
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ ಅವರು ಹಾಸ್ಟೆಲ್‌ನಲ್ಲಿರುವ ಶೌಚಗೃಹ, ಸ್ನಾನ ಗೃಹದ ಅವ್ಯವಸ್ಥೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು. ಹಾಸ್ಟೆಲ್‌ನ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವಾರ್ಡನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಲುಷಿತ ನೀರು, ನಾರುತ್ತಿರುವ ಶೌಚಗೃಹದ ಸೆಪ್ಟಿಕ್ ಟ್ಯಾಂಕ್, ಕೆಟ್ಟು ನಿಂತ ಫ್ಯಾನ್‌ಗಳು ಮತ್ತು ಗುಣಮಟ್ಟವಿಲ್ಲದ ಆಹಾರದ ಕುರಿತು ಪಾಲಕರು ಮತ್ತು ವಿದ್ಯಾರ್ಥಿಗಳು ಅಧಿಕಾರಿಗಳ ಗಮನಕ್ಕೆ ತಂದರು. ಸಹಾಯಕ ನಿರ್ದೇಶಕಿ ಮೀನಾಕ್ಷಿ ಗುದಗಿ ಪ್ರತಿಕ್ರಿಯಿಸಿ, ‘ಹಾಸ್ಟೆಲ್‌ನ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಮತ್ತು ಉತ್ತಮ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.