ನಿಕೇತ ಹೊನ್ನಳ್ಳಿ, ಸುಬ್ರಮಣಿ ಜೆ., ಅಂಕಿತ ಯೋಗಿ. 
ಧಾರವಾಡ

ಐರನ್​ ಮ್ಯಾನ್​ ಸ್ಪರ್ಧೆಯಲ್ಲಿ ಹುಬ್ಬಳ್ಳಿಗರ ಸಾಧನೆ

ಗೋವಾದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಸಹಿಷ್ಣುತಾ ಕ್ರೀಡಾಕೂಟ

ಹುಬ್ಬಳ್ಳಿ: ಗೋವಾದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಷ್ಠಿತ ಸಹಿಷ್ಣುತಾ ಕ್ರೀಡಾಕೂಟ (ಎಂಡುರನ್ಸ್​ ಸ್ಪೋರ್ಟಿಂಗ್​ ಇವೆಂಟ್ಸ್​) ಐರನ್​ಮ್ಯಾನ್​ 70.3 ಗೋವಾ ಆವೃತ್ತಿಯಲ್ಲಿ ಹುಬ್ಬಳ್ಳಿಯ ನಾಲ್ವರು ಉತ್ತಮ ಸಾಧನೆ ತೋರಿದ್ದಾರೆ.

ಐರನ್​ ಮ್ಯಾನ್​ 70.3 ಸ್ಪರ್ಧೆಯಲ್ಲಿ ನಗರದ ನಿಕೇತ ಹೊನ್ನಳ್ಳಿ ಅವರು ಹುಬ್ಬಳ್ಳಿಯಿಂದ ಭಾಗಿಯಾದವರ ಪೈಕಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಐರನ್​ಮ್ಯಾನ್​ 70.3 ಎಂಬುದು ವಿಶ್ವದ ಅತ್ಯಂತ ಸವಾಲಿನ ದೀರ್ಘ -ದೂರದ ಟ್ರಯಾಥ್ಲಾನ್​ ಪ್ರಕಾರಗಳಲ್ಲಿ ಒಂದಾಗಿದ್ದು, ಇದರಲ್ಲಿ ಒಟ್ಟು 70.3 ಮೈಲು (113 ಕಿ.ಮೀ) ದೂರ ವಿವಿಧ ಕ್ರೀಡೆಗಳಲ್ಲಿ ಕ್ಷಮತೆ ಪರೀಕ್ಷಿಸಲಾಗುತ್ತದೆ. ಇದರಲ್ಲಿ 1.9 ಕಿ.ಮೀ ಮುಕ್ತ ಜಲರಾಶಿಯಲ್ಲಿ ಈಜು, 90 ಕಿ.ಮೀ ಸೈಕ್ಲಿಂಗ್​ ಮತ್ತು 21.1 ಕಿ.ಮೀ ಹಾಫ್​ ಮ್ಯಾರಥಾನ್​ ಓಟ ಸೇರಿವೆ. ಈ ಮೂರೂ ವಿಭಾಗಗಳನ್ನು ಎಂಟು ತಾಸು ನಿಗದಿತ ಸಮಯದೊಳಗೆ ಕ್ರೀಡಾಪಟುಗಳು ಪೂರ್ಣಗೊಳಿಸಬೇಕಾಗುತ್ತದೆ.

ನಿಕೇತ ಹೊನ್ನಳ್ಳಿ ಅವರು ಈ ಸವಾಲನ್ನು 7 ತಾಸಿನಲ್ಲಿ ಪೂರ್ಣಗೊಳಿಸಿ ಹುಬ್ಬಳ್ಳಿಯಿಂದ ಹೋದವರಲ್ಲಿ ಮೊದಲಿಗರಾಗಿದ್ದಾರೆ. ಹುಬ್ಬಳ್ಳಿಯ ಸುಬ್ರಮಣಿ ಜೆ., ಅಂಕಿತ ಯೋಗಿ ಹಾಗೂ ಹಾದಿರ್ಕ ಯೋಗಿ ಅವರು ನಂತರದ ಸ್ಥಾನ ಪಡೆದಿದ್ದಾರೆ.

2026ರ ಈ ಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 62 ದೇಶಗಳ ಸುಮಾರು 1500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಇದು ಏಷ್ಯಾದ ಅತ್ಯಂತ ಜನಪ್ರಿಯ ಸಹಿಷ್ಣುತಾ ಕ್ರೀಡಾಕೂಟದಲ್ಲಿ ಒಂದಾಗಿದೆ.

ವರ್ಲ್ಡ್​ ಟ್ರಯಥ್ಲಾನ್​ ಕಾರ್ಪೋರೇಷನ್ (ಡಬ್ಲೂಟಿಸಿ), ಸ್ಥಳಿಯ ಸಂಘಟಕ ಮತ್ತು ರೇಸ್​ ನಿರ್ದೇಶಕ ದೀಪಕರಾಜ್​ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಯುವಕರಲ್ಲಿ ಧೈರ್ಯ, ಪರಿಶ್ರಮ, ಶಿಸ್ತು ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಲು ನೆರವಾಗುವ ಇಂತಹ ಕಾರ್ಯಕ್ರಮಗಳು ಇತರರಿಗೆ ಸ್ಪೂರ್ತಿದಾಯಕವಾಗಿವೆ. ಯುವಕರು ಇಂತಹ ಸ್ಪರ್ಧೆಗಳ ಬಗ್ಗೆ ಗಮನ ಹರಿಸಬೇಕು ಎಂದು ಉದ್ಯಮಿ, ನಿಕೇತ ತಂದೆ ನಿಲೇಶ ಹೊನ್ನಳ್ಳಿ ಅಭಿಪ್ರಾಯಪಡುತ್ತಾರೆ.