ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ (Abolish NEET) ನಡೆಸಲಾಗುವ ನೀಟ್ ರದ್ದು ಪಡಿಸಿ ರಾಜ್ಯಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 
ಧಾರವಾಡ

ನೀಟ್ ರದ್ದು (Abolish NEET) ಪಡಿಸಲು ಆಗ್ರಹ

ಸಂತೋಷ ವೈದ್ಯ
ಹುಬ್ಬಳ್ಳಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ (Abolish NEET) ನಡೆಸಲಾಗುವ ನೀಟ್ ರದ್ದು ಪಡಿಸಿ ರಾಜ್ಯಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್​ಎಸ್​ಯುುಐ)ದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ವಿಶಾಲ ಮಾನೆ ನೇತೃತ್ವದಲ್ಲಿ ವಿದ್ಯಾನಗರದ ಬಿವಿಬಿ ಕಾಲೇಜು ಎದುರು ಪ್ರತಿಭಟನೆ ನಡೆಯಿತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.
ನೀಟ್ ರದ್ದುಪಡಿಸಿ, ರಾಜ್ಯ ಸರ್ಕಾರವೇ ವೈದ್ಯಕೀಯ ಪ್ರವೇಶಕ್ಕಾಗಿ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು. ನೀಟ್ ಅಕ್ರಮದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ತರಬೇತಿ ಕೇಂದ್ರಗಳಿಗೆ ತೆರಳದ ಇವರು ವೈದ್ಯಕೀಯ ಶಿಕ್ಷಣದಿಂದ ವಂಚನೆಗೊಳಗಾಗುತ್ತಿದ್ದಾರೆ ಎಂದು ವಿಶಾಲ ಮಾನೆ ಹೇಳಿದರು.
ಪರೀಕ್ಷಾ ಅಕ್ರಮದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಒಂದಲ್ಲ ಒಂದು ವರ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದರು.
ನಿಖಿಲ್ ಹಿರೇಮಠ, ಸುಮಾ, ಸೇರಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.