ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಿರಂತರ ಅಭಿಷೇಕ ಸೇವೆಗಾಗಿ ಮೊಬೈಲ್​ ಆ್ಯಪ್​ ಅನ್ನು ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಡಾ. ವಿಜಯಮಹಾಂತೇಶ ಪೂಜಾರ, ಡಾ. ಚಂದ್ರಪ್ರಭಾ ಪೂಜಾರ, ವಿಶ್ವನಾಥ ಕಮತಗಿ, ಅಮರೇಶ ಹಿಪ್ಪರಗಿ ಇತರರು ಇದ್ದರು. 
ಧಾರವಾಡ

ಕರ್ತೃ ಗುರುಸಿದ್ದೇಶ್ವರ ಗದ್ದುಗೆ ಅಭಿಷೇಕ ಸೇವೆ

ಮೊಬೈಲ್​ ಆ್ಯಪ್ ನಿಂದ ಸಲೀಸು

ಹುಬ್ಬಳ್ಳಿ: ಇಲ್ಲಿಯ ಜಗದ್ಗುರು ಮೂರುಸಾವಿರ ಮಠದ ನಿರಂತರ ಅಭಿಷೇಕ ಸೇವೆಯನ್ನು ಇದೀಗ ಡಿಜಿಟಲ್​ ಮಾಡಲಾಗಿದ್ದು, ಇದರ ನಿರ್ವಹಣೆಗೆ ಮೊಬೈಲ್​ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಭಕ್ತರು ಆ್ಯಪ್ ಮೂಲಕ ತಮ್ಮ ಅಭಿಷೇಕ ಸರದಿ, ದಿನಾಂಕ ಹಾಗೂ ಸಮಯವನ್ನು ಮನೆಯಲ್ಲಿ ಕುಳಿತು ನಿರ್ವಹಣೆ ಮಾಡಬಹುದಾಗಿದೆ. ಮಾತ್ರವಲ್ಲ, ವರ್ಷದ ಯಾವ ದಿನ ನಿಮ್ಮ ಸಂಕಲ್ಪದ ಪೂಜೆ, ಅಭಿಷೇಕ ಇದೆ ಎಂಬುದನ್ನು ಆ್ಯಪ್ ನೆನಪು ಮಾಡಿಕೊಡಲಿದೆ. ಆಗ ಭಕ್ತರು ಶ್ರೀಮಠಕ್ಕೆ ಬಂದು ಸೇವೆ ಸಲ್ಲಿಸಬಹುದು.

ಶ್ರೀಮಠದಲ್ಲಿ ಏರ್ಪಡಿಸಿದ್ದ ಶ್ರೀಮಹಾಲಕ್ಷ್ಮಿ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು ಆ್ಯಪ್​ ಲೋಕಾರ್ಪಣೆ ಮಾಡಿದರು.

ಶ್ರೀಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಿತ್ಯವೂ ಅನ್ನ ಪ್ರಸಾದವೂ ಆಗುತ್ತಿದೆ. ವರ್ಷವಿಡಿ ನಡೆಯುವ ಪೂಜೆ, ಅಭಿಷೇಕ ಮುಂತಾದ ಸೇವಾ ಕಾರ್ಯಗಳನ್ನು ನಿರ್ವಹಣೆ ಮಾಡಲು ಆ್ಯಪ್​ ಹೊರತಂದಿರುವುದು ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಶ್ರೀಮಠದ ಪೂಜಾ ಸಮಿತಿ ಹಾಗೂ ಪ್ರಸಾದ ಸಮಿತಿಯವರು ಸೇರಿ ಆ್ಯಪ್​ ತರುವ ಆಲೋಚನೆ ಮಾಡಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.

ಪ್ರಸಾದ ಸಮಿತಿಯ ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ್​, ಎಸ್​.ಎಸ್​. ಕಮಡೊಳ್ಳಿಶೆಟ್ಟರ್​ ಇತರರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಆ್ಯಪ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆ್ಯಪ್​ ಬಿಡುಗಡೆಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ನರರೋಗ ತಜ್ಞ ಡಾ. ವಿಜಯಮಹಾಂತೇಶ ಪೂಜಾರ ಮಾತನಾಡಿ, ಶ್ರೀಮಠದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ನಮಗೆ ಬಹಳ ಖುಷಿ ಇದೆ. ಆಧುನಿಕ ತಂತ್ರಜ್ಞಾನ ಬೆಳೆದಂತೆ ಭಕ್ತರಿಗೂ ಅವರಿದ್ದಲ್ಲಿಯೇ ಮಾಹಿತಿ ನೀಡಬೇಕೆಂಬ ಆಶಯದೊಂದಿಗೆ ಹೊರತಂದ ಆ್ಯಪ್​ಗೆ ನಮ್ಮಿಂದಾದ ನೆರವು ನೀಡಿದ್ದೇವೆ ಎಂದರು.

ಇನ್​ಡಾಟಾಎಐ ಸಂಸ್ಥೆಯ ಮೃತ್ಯುಂಜಯ ಹಿರೇಮಠ ಅವರು ಆ್ಯಪ್​ ಅಭಿವೃದ್ಧಿ ಪಡಿಸಿದ್ದಾರೆ.

ಗಣ್ಯ ವ್ಯಾಪಾರಸ್ಥ ವಿಶ್ವನಾಥ ಕಮತಗಿ, ರಾಜೇಶ ತೋಳನ್ನವರ, ರಾಜು ಗಿಣಿಮಾವ, ಶಾಂತಣ್ಣ ಹಾವೇರಿಶೆಟ್ಟರ, ವಿಶ್ವನಾಥ ಹೊರಕೇರಿ, ರೇವಣಸಿದ್ದಯ್ಯ ಸಾಲಿಮಠ, ಚನ್ನಯ್ಯ ಎಮ್ಮೆಟ್ಟಿ ಹಿರೇಮಠ, ರಾಜೇಂದ್ರ ಇಂಡಿ, ಡಾ. ಚಂದ್ರಪ್ರಭಾ ಪೂಜಾರ, ರೇಖಾ ಆಪ್ಟೆ, ರತ್ನಾ ಬಸಾಪುರ, ಆಶಾ ಪತ್ತಾರ, ರೂಪಾ ಅಂಗಡಿ, ಸಾಧನಾ ಪೂಜಾರ, ಜ್ಯೋತಿ ಉಪ್ಪಾರ, ಶ್ವೇತಾ ಜೈನ್​, ಹೇಮಾ ಸೋಮವಾರ, ಅರುಣಾಚಲ ಯಲಗಚ್ಚಿ, ಚಂದ್ರು ನವಲಗುಂದ ಇತರರು ಇದ್ದರು.