ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದಲ್ಲಿ ರೈತರು ವರುಣನ ಕೃಪೆಗಾಗಿ ಹಮ್ಮಿಕೊಂಡಿದ್ದ ಕತ್ತೆಗಳ ಮದುವೆ ಸಮಾರಂಭ.
ಧಾರವಾಡ: "ಮಾಂಗಲ್ಯಂ ತಂತುನಾನೇನ ಮಮ ಜೀವನಹೇತುನಾ, ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಶರಧಾಂ ಶತಂ...' ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗಹ ಹಿರೇಮಠದ ವೈದಿಕರಾದ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಹಾಗೂ ಎಸ್.ಎಂ. ಪ್ರಶಾಂತ ರಾಜಗುರು ಅವರು ಮಂತ್ರೂಷ ಮೊಳಗಿಸಿದರು. ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ವಸುಂಧರಾ ಹೆಣ್ಣು ಕತ್ತೆಗೆ ಮಾಂಗಲ್ಯ ಧಾರಣವಾಗುತ್ತಿದ್ದಂತೆ ಬಿತ್ತಿದ ಭೂಮಿಯಲ್ಲಿ ಬೆಳೆ ಪಲ್ಲವಿಸಲು ಗಂಗೆಯ ಸಾನ್ನಿಧ್ಯ ಬಯಸಿ ಮಾಡಿದ ಕತ್ತೆಗಳ ಮದುವೆಗೆ ಸಾಯಾಗಿದ್ದ ಗ್ರಾಮಸ್ಥರು ಅತಾರೋಪಣ ಮಾಡಿದರು.
* ಮಳೆಗಾಗಿ ರೈತರ ಸಂಕಲ್ಪ: ಶ್ರೀ ಮಹಾಗಣಪತಿ ಪೂಜೆ, ಪಂಚಕಲಶಗಳ ಪೂಜೆ ಹಾಗೂ ಗಂಗಾಕಲಶ ಪೂಜೆಯ ನಂತರ ಗ್ರಾಮದ ರೈತರು ಮಳೆಗಾಗಿ ವಿಶೇಷ ಪ್ರಾರ್ಥನೆಯ ಸಂಕಲ್ಪ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ಉಭಯ ಕತ್ತೆಗಳಿಗೆ ಅರಿಷಿಣ ಲೇಪನ ಮಾಡಿ ಸೂರಗಿ ನೀರಿನ ಸ್ನಾನ ಮಾಡಿಸಲಾಯಿತು. ನಂತರ ಪಂಚಕಲಶಗಳ ಸನ್ನಿಧಾನದಲ್ಲಿ ಬಾಸಿಂಗ ಧಾರಣೆ, ಕಂಕಣ ಧಾರಣೆ, ಗುಡಜೀರಕ ಸಿಂಚನ, ಕನ್ಯಾದಾನ, ಮಾಂಗಲ್ಯ ಧಾರಣೆ, ಅತಾ ರೋಪಣ ಮಾಡಲಾಯಿತು. ವಿವಾಹ ಬಂಧನಕ್ಕೆ ಒಳಗಾದ ಉಭಯ ಕತ್ತೆಗಳ ಮೆರವಣಿಗೆ ವಿವಿಧ ಜಾನಪದ ವಾದ್ಯ& ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ಸಂಭ್ರಮದಿಂದ ಕತ್ತೆಗಳ ಮದುವೆ ಮಾಡಿದ ಖುಷಿಯಲ್ಲಿ ಗ್ರಾಮಸ್ಥರು ಶಿರಾ, ಬೂಂದಿ, ಬದನೆಕಾಯಿ ಪಲ್ಯ, ಅನ್ನ ಮತ್ತು ಸಾರನ್ನು ಒಳಗೊಂಡ ನಿಬ್ಬಣದ ಊಟ ಸವಿದರು. ಶುಕ್ರವಾರ ರಾತ್ರಿ ಉಭಯ ಕತ್ತೆಗಳ ನಿಶ್ಚಿತಾರ್ಥ ಸಹ ನಡೆದದ್ದು ಮದುವೆಯ ಮತ್ತೊಂದು ವಿಶೇಷತೆ.