ಸುದ್ದಿಗೋಷ್ಠಿಯಲ್ಲಿ ಗಂಗಪ್ಪ ಜವಳಗಿ ಮಾತನಾಡಿದರು.
ಧಾರವಾಡ: ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಪೀಠಾಽಪತಿ ಕುಮಾರ ವಿರೂಪಾಕ್ಷ ಶ್ರೀಗಳು ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದ್ದು, ಭೂದಾನ ಹಾಗೂ ದುರಾಡಳಿತಕ್ಕೆ ಕಡಿವಾಣ ಹಾಕಲು ಶ್ರೀಮಠಕ್ಕೆ ಟ್ರಸ್ಟ್ ರಚನೆಯಾಗಬೇಕು ಎಂದು ವಿದ್ಯಾದಾನ ಸಮಿತಿಯ ಗೌರವ ಕಾರ್ಯದರ್ಶಿ, ಹಿರಿಯರಾದ ಗಂಗಪ್ಪ ಜವಳಗಿ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ ಈ ಹಿಂದಿನ ಬಸವಲಿಂಗ ಸ್ವಾಮೀಜಿ ಅವರು ವಿದ್ಯಾದಾನ ಸಮಿತಿಗೆ ಎರಡು ಎಕರೆ ಭೂದಾನ ಮಾಡಿದ್ದರು. ಆದರೆ, ಈಗಿನ ಶ್ರೀಗಳು ಹಿರಿಯರ ಒಪ್ಪಿಗೆ ಪಡೆಯದೇ ತಾವೇ ಅಧ್ಯಕ್ಷರಾಗಿರುವ ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆಗೆ ಮಠದ ಎರಡು ಎಕರೆ ಭೂದಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಟ್ರಸ್ಟ್ ರಚಿಸಿ ಟ್ರಸ್ಟ್ನಡಿ ಶ್ರೀಮಠದ ಕಾರ್ಯ ಚಟುವಟಿಕೆ ನಡೆಯಬೇಕು. ಟ್ರಸ್ಟ್ ರಚನೆಗೆ ಶ್ರೀಗಳು ಒಪ್ಪಿಗೆ ನೀಡದಿದ್ದರೆ, ಟ್ರಸ್ಟ್ ರಚನೆಯಾಗುವವರೆಗೂ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ವಿದ್ಯಾದಾನ ಸಮಿತಿಯ ಅಧ್ಯಕ್ಷ ವೀರಣ್ಣ ಪರಾಂಡೆ ಹಾಗೂ ಉಪಾಧ್ಯಕ್ಷ ಅಶೋಕ ಮಸೂತಿ ಮಾತನಾಡಿ, ಶ್ರೀಮಠದ ಆಸ್ತಿ ಪರಭಾರೆ ಆಗುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಶ್ರೀಗಳಿಂದಲೂ ಸರಿಯಾದ ಉತ್ತರವಿಲ್ಲ. ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಮಠದ ಆಸ್ತಿಯ ಮೇಲೆ ಲಕ್ಷಗಟ್ಟಲೆ ಸಾಲ ಮಾಡಿ ಬ್ಯಾಂಕ್ ಭೋಜ ಇರಿಸಿದ್ದಾರೆ ಎಂದು ಆರೋಪಿಸಿದರು. ಶ್ರೀಮಠದ ಒಳಿತಿಗಾಗಿ ಟ್ರಸ್ಟ್ ರಚನೆಯಾದರೆ ಪಾರದರ್ಶಕತೆ ಇರಲಿದೆ ಎಂದರು.