ಉಪ್ಪಿನಬೆಟಗೇರಿ ಧಾರವಾಡ ಮಾರ್ಗ ಮಧ್ಯದ ಹೊಲವೊಂದರಲ್ಲಿ ಕಡಲೆ ಬೆಳೆಗೆ ಸಿಡಿ ರೋಗ ತಗುಲಿದೆ.
- ಅಧಿಕ ಪ್ರಮಾಣದಲ್ಲಿ ಬಿತ್ತನೆ
- ಹತೋಟಿ ಹೇಗೆಂಬ ಚಿಂತೆಯಲ್ಲಿ ರೈತರು
- ಬೆಳೆ ಪರಿವರ್ತನೆಯೇ ಪರಿಹಾರ
ಉಪ್ಪಿನಬೆಟಗೇರಿ: ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಕಡಲೆ (chickpeas) ಬೆಳೆಯುವ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಜತೆಜತೆಗೆ ಬೆಳೆಗೆ ಸಿಡಿ ರೋಗ ಬಾಧೆಯೂ ಹೆಚ್ಚಾಗಿ ಕಾಣಿಕೊಳ್ಳುತ್ತಿದೆ.
ಹಿಂಗಾರು ಹಂಗಾಮಿನಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ಕಡಲೆ ಬೆಳೆ ಬಿತ್ತನೆಯಾಗಿದೆ. ಇದೀಗ ಕಡಲೆ ಹೂ ಬಿಡುವ ಹಂತ ತಲುಪಿದೆ. ಆದರೆ, ಆರಂಭಿಕ ಹಂತದಲ್ಲೇ ಕಡಲೆಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದು, ಇಳುವರಿಗೂ ನೇರ ಹೊಡೆತ ಕೊಡುವಂತಿದೆ.
ಅಮ್ಮಿನಬಾವಿ ಹೋಬಳಿಯಲ್ಲಿ ಸುಮಾರು 22 ಸಾವಿರ ಹೆಕ್ಟೇರ್, ಗರಗ ಹೋಬಳಿಯಲ್ಲಿ 6250 ಹೆಕ್ಟೇರ್ ಕಡಲೆ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಭೂಮಿಯ ಅಧಿಕ ತೇವಾಂಶದಿಂದಾಗಿ ಕಡಲೆಗೆ ಸಿಡಿ (ಬೆಂಕಿ) ರೋಗ ವಕ್ಕರಿಸಿದೆ. ಹೋದ ವರ್ಷ ಸಿಡಿ ರೋಗ ಬಾಧಿಸಿದ್ದರಿಂದ ಇಳುವರಿ ಕುಂಠಿತಗೊಂಡಿತ್ತು. ಈ ಬಾರಿಯೂ ರೋಗ ಬಾಧಿಸುತ್ತಿರುವುದು ರೈತರು ಪರಿತಪಿಸುವಂತಾಗಿದೆ.
ಏನಿದು ಸಿಡಿ?
ಸಿಡಿ ರೋಗಕ್ಕೆ ತುತ್ತಾದ ಕಡಲೆ ಬೆಳೆಯ ಎಲೆಗಳು ಹಳದಿಯಾಗಿ ಬಾಡಿ, ಜೋತು ಬಿದ್ದು ಒಣಗಿ ಉದುರದೇ ಗಿಡಕ್ಕೆ ಅಂಟಿಕೊಂಡಿರುತ್ತವೆ. ಗಿಡದ ಬೇರುಗಳು ಕೊಳೆಯದೇ ಆರೋಗ್ಯವಾಗಿಯೇ ಇರುವಂತೆ ಕಾಣುತ್ತವೆ. ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾಂಶ ಕಡು ಕಪ್ಪಾಗಿರುವುದು ಕಂಡು ಬರುತ್ತದೆ. ಈ ರೋಗವು ಶೇ. 5-30ರಷ್ಟು ಹಾನಿ ಮಾಡುತ್ತದೆ. ಬೇರು ಕೊಳೆ ರೋಗದಿಂದ ಒಣಗಿದ ಗಿಡಗಳನ್ನು ಕಿತ್ತಾಗ ಸರಳವಾಗಿ ಬರುತ್ತದೆ. ತಂತು ಬೇರುಗಳು ಕೊಳೆತು ಭೂಮಿಯಲ್ಲೇ ಉಳಿದು ತಾಯಿ ಬೇರು ಮಾತ್ರ ಗಿಡದ ಜತೆ ಬರುತ್ತದೆ.
ಹತೋಟಿ ಹೇಗೆ.?
ಸಿಡಿ ರೋಗ ಹತೋಟಿಗೆ ಯಾವುದೇ ಶಾಶ್ವತ ಪರಿಹಾರವಿಲ್ಲ. ಹೀಗಾಗಿ ಬಿತ್ತನೆ ಮೊದಲು ಮಾಡುವ ಬೀಜೋಪಚಾರದಿಂದ ನಿಯಂತ್ರಿಸಬಹುದು. ಇನ್ನು ಕಡಲೆ ಬೆಳೆಯಲ್ಲಿ ಈ ಲಕ್ಷಣ ಕಂಡು ಬಂದ ಕೂಡಲೇ ರೋಗ ಬಾಧಿತ ಗಿಡಗಳನ್ನು ಕಿತ್ತು ಸುಡಬೇಕು. ಆಗ ಮಾತ್ರ ಹತೋಟಿಗೆ ತರಬಹುದು. ಬಯೋಸ್ಟಿನ್, ಕಾರ್ಬಡೈಜಿಮಂ ಔಷಧವನ್ನು ಒಂದು ಲೀಟರ್ ನೀರಿಗೆ 2 ಗ್ರಾಂ.ನಂತೆ ಬೆರೆಸಿ ರೋಗ ತಗುಲಿದ ಗಿಡಗಳ ಸುತ್ತಲೂ ಮಣ್ಣಿಗೆ ಹಾಕಬೇಕು.
ಬೆಳೆ ಪರಿವರ್ತನೆಯೇ ಪರಿಹಾರ
ಕಡಲೆ ಬೆಳೆಗಳನ್ನು ಬೆಂಕಿ ರೋಗದಿಂದ ರಕ್ಷಿಸಿಕೊಳ್ಳಲು ಬೆಳೆಯ ಪರಿವರ್ತನೆ ಮುಖ್ಯವಾಗಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ದ್ವಿದಳ, ಹಿಂಗಾರಿನಲ್ಲಿಯೂ ದ್ವಿದಳ ಬಿತ್ತನೆ ಕಂಡ ಭೂಮಿಯಲ್ಲಿ ಇಂತಹ ಸಿಡಿ ರೋಗ ಬಾಧೆ ಜಾಸ್ತಿಯಾಗಲು ಸಹಕಾರಿಯಾಗಿದೆ. ಹೀಗಾಗಿ ಮುಂಗಾರು ಅಥವಾ ಹಿಂಗಾರಿನಲ್ಲಿ ಬೆಳೆಯ ಪರಿವರ್ತನೆ ಮಾಡಿದಾಗ ಮಾತ್ರ ಈ ರೋಗದಿಂದ ಶಾಶ್ವತ ಪರಿಹಾರ ದೊರಕುತ್ತದೆ.
ಕಳೆದ ಒಂದು ವಾರದಲ್ಲಿ ನ. 15 ರಿಂದ ನ. 21 ರವರೆಗೆ ವಾಡಿಕೆ 9 ಮಿ.ಮೀಯಲ್ಲಿ ಮಳೆಯೇ ಆಗಿಲ್ಲ. ನ. 1ರಿಂದ ನ. 21ರವರೆಗಿನ 28.4 ಮಿ.ಮೀ ವಾಡಿಕೆ ಮಳೆಯಲ್ಲಿ ಬರೀ 7.2 ಮಿ.ಮೀ ಮಳೆ ಆಗಿದ್ದು, ಹೀಗಾಗಿ ಶೇ. 75ರಷ್ಟು ಮಳೆಯ ಕೊರತೆ ಇದೆ.