ಧಾರವಾಡ ಆರ್‌ಟಿಒ ಕಚೇರಿ ಕೌಂಟರ್
ಮಂಜುನಾಥ ಎಸ್. ಅಂಗಡಿ ಧಾರವಾಡ
ವಾಹನಗಳ ಮೇಲೆ ದಾಖಲಾಗಿರುವ ಮೋಟಾರು ವಾಹನ ಕಾಯ್ದೆ ಉಲ್ಲಂನೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ವಾಹನ ಮಾಲೀಕರು ಹಲವು ವರ್ಷಗಳಿಂದ ದಂಡ ಭರಿಸದೆ ಬಾಕಿ ಪ್ರಕರಣಗಳ ದಂಡದಲ್ಲಿ ಶೇ. 50ರಷ್ಟು ಭರಿಸಲು ಸಾರಿಗೆ ಇಲಾಖೆ ಅವಕಾಶ ನೀಡಿದೆ.
ವಾಹನಗಳ ಮೇಲೆ ಸಂಚಾರಿ ಇ- ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಪೊಲೀಸ್ ಇಲಾಖೆ ಶೇ. 50ರಷ್ಟು ರಿಯಾಯಿತಿ ನೀಡಿದೆ. ಇದೇರೀತಿ ಸಾರಿಗೆ ಇಲಾಖೆ ಕೂಡ ಅರ್ಧ ದಂಡ ಭರಿಸಿ ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ವಾಹನ ಮಾಲೀಕರಿಗೆ ಜೂ. 21ರಿಂದ ಜು. 10ರವರೆಗೆ 2ನೇ ಬಾರಿ ಕಾಲಾವಕಾಶ ನೀಡಿದೆ. 1991ರ ಏ. 1ರಿಂದ 2022ರ ಮಾ. 31ರವರೆಗಿನ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸಲಿದೆ.
ಕೆಎ 25, ಕೆಎ 63 ಪ್ರಕರಣಗಳು:
ನವನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ& 25) ವ್ಯಾಪ್ತಿಯಲ್ಲಿ 1991ರಿಂದ 2022ರ ಮಾ. 31ರವರೆಗೆ 4,503 ಪ್ರಕರಣಗಳು ಬಾಕಿ ಇವೆ. ಈ ಅವಧಿಯ ಪ್ರಕರಣಗಳಿಗೆ ಶೇ. 50ರಷ್ಟು ರಿಯಾಯಿತಿ ಸಿಗಲಿದೆ. 2017ರಲ್ಲಿ ಆರಂಭವಾದ ಹುಬ್ಬಳ್ಳಿ ಗಬ್ಬೂರ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 2022ರವರೆಗೆ 2,900 ಪ್ರಕರಣ ಬಾಕಿ ಇವೆ. ಅರ್ಧ ದಂಡ ಕಟ್ಟಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
ಮೋಟಾರು ವಾಹನ ಕಾಯ್ದೆ (1998) ಅನ್ವಯ ನಿಯಮಾವಳಿ ಉಲ್ಲಂಘಿಸುವ ವಾಹನಗಳ ಮೇಲೆ ಮೋಟಾರು ವಾಹನ ನಿರೀಕ್ಷಕರು ಪ್ರಕರಣ ದಾಖಲಿಸುತ್ತಾರೆ. ವಾಹನಗಳ ಸೂಕ್ತ ದಾಖಲೆಗಳು- ಲೈಸೆನ್ಸ್- ಹೊಗೆ ಮುಕ್ತ ಪ್ರಮಾಣಪತ್ರ, ಇನ್ಶುರೆನ್ಸ್ ಇಲ್ಲದಿರುವುದು, ನೋಂದಣಿ ನವೀಕರಣ ಆಗದಿರುವುದು, ತೆರಿಗೆ ಪಾವತಿಸದಿರುವುದು, ರಹದಾರಿ ಪ್ರಮಾಣಪತ್ರ ಇಲ್ಲದಿರುವುದು, ನಿಗದಿಗಿಂತ ಹೆಚ್ಚಿನ ತೂಕದ ಸಾಮಗ್ರಿ ಸಾಗಣೆ ಮತ್ತು ಪ್ರಯಾಣಿಕರ ಸಾಗಣೆ, ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಮತ್ತು ದ್ವಿಚಕ್ರ ವಾಹನಗಳಿಗೆ ಪೊಲೀಸ್ ಇಲಾಖೆಯ ನಿಯಮಾವಳಿಗಳು ಅನ್ವಯವಾಗುತ್ತವೆ.
ಧಾರವಾಡ ಪೂರ್ವ ಹಾಗೂ ಧಾರವಾಡ ಪಶ್ಚಿಮ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ದಂಡಕ್ಕೆ ಗುರಿಯಾದ ವಾಹನ ಸವಾರರಿಗೆ ನೋಟಿಸ್ ಮೂಲಕ ದಂಡ ಪಾವತಿಗೆ ಸೂಚನೆ ನೀಡಲಾಗುತ್ತಿದೆ. ಪ್ರತಿ 3 ತಿಂಗಳಿಗೊಮ್ಮೆ ತೆಮಾಸಿಕ ದಂಡ ವಸೂಲಾತಿ ಅಭಿಯಾನ ನಡೆಸಲಾಗುತ್ತಿದೆ. ದಂಡ ಭರಿಸದಿರುವವರಿಗೆ ಇಲಾಖೆಯಿಂದ ನೋಟಿಸ್ ನೀಡಿ ವಾಹನ ಹರಾಜು ಮಾಡಲು ಅವಕಾಶ ಇದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.
"
ಮೋಟಾರು ವಾಹನ ಕಾಯ್ದೆಯಡಿ ಬಸ್, ಲಾರಿ ಆಟೋ, ಬೈಕ್ ಹಾಗೂ ಗೂಡ್ಸ್ ವಾಹನಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಬಸ್, ಆಟೋ ನಿಲ್ದಾಣ, ಜನನಿಬಿಡ ಪ್ರದೇಶಗಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಕಸ ಸಂಗ್ರಹಣೆ ವಾಹನದಲ್ಲಿ ಜಿಂಗಲ್ಸ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ದಂಡಕ್ಕೆ ಗುರಿಯಾದವರಿಗೆ ಕರೆ ಮಾಡಿ ದಂಡ ಪಾವತಿಸಲು ಸೂಚಿಸಲಾಗುತ್ತಿದೆ.
— ಶ್ರೀಧರ ಮಲ್ಲಾಡ, ಉಪ ಸಾರಿಗೆ ಆಯುಕ್ತ, ಧಾರವಾಡ ಪಶ್ಚಿಮ