ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ
ಧಾರವಾಡ: ರಾಜ್ಯ ಸರ್ಕಾರ ತೀರ್ಮಾನಿಸಿದಂತೆ 56,432 ಹುದ್ದೆಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನಾ ದಿನದ ಅಂಗವಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಎಲ್ಲ ನೇಮಕಾತಿಗಳ ದುಬಾರಿ ಅರ್ಜಿ ಶುಲ್ಕ ಕೈ ಬಿಡಬೇಕು ಹಾಗೂ ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ಒದಗಿಸಬೇಕು. ರಾಜ್ಯದಲ್ಲಿ ಎಲ್ಲ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲ ರೀತಿಯ ಪರೀಕ್ಷಾ ಅಕ್ರಮ ತಡೆಗಟ್ಟಲು ಹಾಗೂ ಪಾರದರ್ಶಕ ನೇಮಕಾತಿಗಾಗಿ ಪಿ.ಸಿ. ಹೋಟಾ ಸಮಿತಿ ವರದಿ ತಕ್ಷಣವೇ ಜಾರಿಗೊಳಿಸಬೇಕು. ಬಜೆಟ್‌ನಲ್ಲಿ ಘೋಷಿಸಿದಂತೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿ ಕೂಡಲೇ ಇಂದಿರಾ ಕ್ಯಾಂಟೀನ್ ತೆರೆಯಬೇಕು ಎಂದು ಆಗ್ರಹಿಸಿದರು.
ಧಾರವಾಡ, ಬೆಂಗಳೂರು, ವಿಜಯಪುರ ಸೇರಿ ರಾಜ್ಯದಾದ್ಯಂತ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಪ್ರದೇಶಗಳ ಹೋಟೆಲ್‌ಗಳು, ಖಾನಾವಳಿಗಳು, ಉಪಹಾರ ಮಂದಿರಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಒದಗಿಸುವುದನ್ನು ಖಾತ್ರಿಪಡಿಸಲು ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು. ಬಳಿಕ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಸಹ ಸಂಚಾಲಕ ಭವಾನಿ ಶಂಕರ್‌ಗೌಡ, ಜಿಲ್ಲಾ ಸಂಚಾಲಕ ವೀರೇಶ ನರೇಗಲ್, ಹನುಮಗೌಡ ದಾಸಿಗೌಡರ, ಅಮೃತ ಕೊಂಡಿಕೊಪ್ಪ, ಯಲ್ಲಪ್ಪ ದೊರೆ ಇತರರಿದ್ದರು.