ಹುಬ್ಬಳ್ಳಿ: ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ವ್ಯಾಪ್ತಿಗೆ ಒಳಪಡಲು ತಿಂಗಳ ವೇತನ ಮಿತಿಯನ್ನು 15ಸಾವಿರ ರೂ.ದಿಂದ 25 ಸಾವಿರ ರೂ.ಗೆ ಹೆಚ್ಚಿಸಿರುವುದರಿಂದ ದೇಶದಲ್ಲಿ 51 ಲಕ್ಷ ಹೆಚ್ಚುವರಿ ಉದ್ಯೋಗಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ರಕ್ಷಣೆಯನ್ನು ಗಣನೀಯವಾಗಿ ವಿಸ್ತರಿಸಿದಂತಾಗಿದೆ.
2014ರಲ್ಲಿ 15 ಸಾವಿರ ರೂ.ಗೆ ವೇತನ ಪರಿಷ್ಕರಿಸಲಾಗಿತ್ತು. ಇದೀಗ 25 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಕಡ್ಡಾಯ ಇಪಿಎಫ್ಒ ವ್ಯಾಪ್ತಿಯಿಂದ ಹೊರಗಿರುವ ಹಾಗೂ ವಿಸ್ತರಿತ ವೇತನದ ಅಡಿಯಲ್ಲಿ ಉದ್ಯೋಗಕ್ಕೆ ಸೇರುವ ನೌಕರರನ್ನು ಅನ್ವಯವಾಗುವ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ಶಾಸನಬದ್ಧ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗುತ್ತದೆ.
ಕೇಂದ್ರದ ಈ ಅನುಮೋದನೆಯಿಂದ ಅನ್ವಯವಾಗುವ ಯೋಜನಾ ನಿಬಂಧನೆಗಳ ಅನುಸಾರ ಭವಿಷ್ಯ ನಿಧಿ ಉಳಿತಾಯ, ನೌಕರರ ಪಿಂಚಣಿ ಯೋಜನೆ ಅಡಿಯಲ್ಲಿ ಪಿಂಚಣಿ ರಕ್ಷಣೆ ಹಾಗೂ ನೌಕರರ ಠೇವಣಿ -ಸಂಬಂಧಿತ ವಿಮಾ ಯೋಜನೆ ಅಡಿಯಲ್ಲಿ ವಿಮಾ ರಕ್ಷಣೆಗೆ ಹೆಚ್ಚಿನ ನೌಕರರಿಗೆ ಪ್ರವೇಶ ದೊರೆಯಲಿದೆ.
ಇಪಿಎಫ್ಒ ಪ್ರಸ್ತುತ ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ವ್ಯವಸ್ಥೆಗಳಲ್ಲಿ ಒಂದನ್ನು ನಿರ್ವಹಿಸುತ್ತಿದ್ದು, ನೌಕರರ ಭವಿಷ್ಯ ನಿಧಿ, ಪಿಂಚಣಿ ಯೋಜನೆ ಹಾಗೂ ನೌಕರರ ಠೇವಣಿ -ಸಂಬಂಧಿತ ವಿಮಾ ಯೋಜನೆಗಳನ್ನು ನಿರ್ವಹಿಸುತ್ತಿದೆ.
ಇತ್ತೀಚಿನ ಇಪಿಎಫ್ಒ ಅಂಕಿ ಅಂಶಗಳ ಪ್ರಕಾರ, ಸುಮಾರು 7.98 ಕೋಟಿ ಸದಸ್ಯರು ಮತ್ತು ಸುಮಾರು 7.68 ಲಕ್ಷ ಸಂಸ್ಥೆಗಳು ಸಂಘಟನೆಗೆ ಕೊಡುಗೆ ನೀಡುತ್ತಿದ್ದಾರೆ.
ನೌಕರರ ಪಿಂಚಣಿ ಯೋಜನೆಯು ಸುಮಾರು 82 ಲಕ್ಷ ಜನರಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಆಶುತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.