ಧಾರವಾಡ: ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 310 ಗ್ರಾಂ ಚಿನ್ನ, 26 ಕೆಜಿ ಬೆಳ್ಳಿ ಆಭರಣ ಹಾಗೂ ಬೊಲೆರೋ ವಾಹನ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ಕಳೆದ ಏಪ್ರಿಲ್ನಲ್ಲಿ ಮನೆಗಳ್ಳತನ ನಡೆದಿತ್ತು. ಮೇ 15ರಂದು ತಡರಾತ್ರಿ ಹಾವೇರಿ ಜಿಲ್ಲೆ ಹಾನಗಲ್ ಠಾಣೆ ವ್ಯಾಪ್ತಿಯಲ್ಲಿ ಚಿಕ್ಕಾಂಶಿ ಹೊಸೂರ ಗ್ರಾಮದ ಬಂಗಾರದ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳು ಬಂಗಾರದ ಅಂಗಡಿಯಲ್ಲಿದ್ದ ಸುಮಾರು 3 ಕ್ವಿಂಟಲ್ ಭಾರದ ತಿಜೋರಿಯನ್ನೇ ಹೊತ್ತೊಯ್ದಿದ್ದರು.
ಎರಡೂ ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಬಾಳೆಹೊಸೂರ ಗ್ರಾಮದ ಶಿವರಾಜ ಮೊಡಕೇರ ಹಾಗೂ ಸಿಂಧನೂರ ತಾಲೂಕಿನ ಅಂಬಾಮಠದ ಅಶೋಕ ಉರ್ಫ್ ರಮೇಶ ಕೊಂಚಿಕೊರವರ ಎಂಬುವರನ್ನು ಬಂಧಿಸಿದ್ದಾರೆ. ಈ ಎರಡು ಪ್ರಕರಣಗಳಲ್ಲದೆ, ತೆಲಂಗಾಣದಲ್ಲಿ ಕಳ್ಳತನ ಮಾಡಿದ್ದ ಬೊಲೆರೋ ವಾಹನ ಜಪ್ತಿ ಮಾಡಿದ್ದಾರೆ. ಬಂಧಿತರಿಂದ ಒಟ್ಟು 1.15 ಕೋಟಿ ರೂಪಾಯಿ ಮೌಲ್ಯದ ಆಭರಣ, ವಾಹನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ನಾಲ್ವರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಧಾರವಾಡ ಎಸ್ಪಿ ಗುಂಜನ್ ಆರ್ಯ ಹಾಗೂ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ, ನವಲಗುಂದ ಸಿಪಿಐ ರವಿ ಕಪ್ಪತ್ತನವರ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ, ಹುಬ್ಬಳ್ಳಿ ಗ್ರಾಮೀಣ ಠಾಣೆ ಹಾಗೂ ಹಾನಗಲ್ ಠಾಣೆ ಪಿಎಸ್ಐಗಳಾದ ಇಮ್ರಾನ್ ಪಠಾಣ್, ಸಂಪತ್, ಶರಣಪ್ಪ, ಮಂಜುನಾಥ, ಯಲ್ಲಪ್ಪ ಹಾಗೂ ಅಪರಾಧ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.