leopard ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸುತ್ತಿರುವ ನಿಲ್ದಾಣದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು.  
ಧಾರವಾಡ

leopard ವಿಮಾನ ನಿಲ್ದಾಣದಲ್ಲಿ ಚಿರತೆ ಸೆರೆಗೆ 2 ಬೋನ್

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ವಿಮಾನ ನಿಲ್ದಾಣ, ಗಾಮನಗಟ್ಟಿ ಬಳಿ 15 ಕ್ಯಾಮರಾ ಟ್ರ್ಯಾಪ್​ಗಳ ಅಳವಡಿಕೆ.
  • ಮುಳ್ಳು ಹಂದಿಯೊಂದನ್ನು ತಿಂದಿರುವ ಚಿರತೆ.
  • ವಾಯುವಿಹಾರ ನಿಷೇಧಿಸಲಾಗಿದೆ.
ಈ ಮೊದಲು ವಿಮಾನ ನಿಲ್ದಾಣದ ಪರಿಸರದಲ್ಲಿ ನಾಯಿ ಇರುವ ಒಂದು ಬೋನ್ ಇಟ್ಟಿದ್ದರು. ಇದೀಗ ಮತ್ತೆ, ಗಾಮನಗಟ್ಟಿಯಿಂದ ವಿಮಾನ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿ ಮತ್ತೊಂದು ಬೋನು ಇಟ್ಟು, ಇನ್ನೊಂದು ನಾಯಿಯನ್ನು ಬೋನಿನೊಳಗೆ ಇಟ್ಟಿದ್ದಾರೆ.
ಎರಡೂ ನಾಯಿಗಳಿಗೆ ನಿರಂತರ ಆಹಾರ ಹಾಗೂ ನೀರನ್ನು ಅರಣ್ಯ ಇಲಾಖೆ ಸಿಬ್ಬಂದಿ ನೀಡುತ್ತಿದ್ದಾರೆ. ಚಿರತೆ ಬೋನಿನೊಳಗೆ ಪ್ರವೇಶಿಸಿದರೂ ನಾಯಿಯನ್ನು ಹಿಡಿಯದಂತೆ ಬೋನು ವಿನ್ಯಾಸ ಮಾಡಲಾಗಿದೆ.
ವಿಮಾನ ನಿಲ್ದಾಣದ ಪರಿಸರದಲ್ಲಿ ಮುಳ್ಳು ಹಂದಿಯೊಂದನ್ನು ಚಿರತೆ ತಿಂದಿರುವ ಕುರುಹುಗಳು ಕಂಡುಬಂದಿವೆ. ಈ ಪ್ರದೇಶದಲ್ಲಿ ಮುಳ್ಳು ಹಂದಿ, ನಾಯಿ, ನವಿಲು, ಮೊಲ, ನರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ.
ಬೋನಿನಲ್ಲಿ ಇಟ್ಟಿರುವ ನಾಯಿಯನ್ನು ತಿನ್ನಲು ಚಿರತೆ ಮುಂದಾಗುವುದೇ ಎಂಬ ಪ್ರಶ್ನೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ. ಆದರೆ, ಚಿರತೆ ನಿತ್ಯ ಓಡಾಡುತ್ತಿರುವ ಮಾರ್ಗದಲ್ಲಿಯೇ ಬೋನು ಇಟ್ಟಿರುವುದರಿಂದ ಅದರಲ್ಲಿನ ನಾಯಿಯನ್ನು ತಿನ್ನಲು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ರಾತ್ರಿ ಸಮಯದಲ್ಲಿ ಬೇಟೆಯಾಡುವ ಚಿರತೆ, ಹಗಲು ಹೊತ್ತಿನಲ್ಲಿ ಮರಗಳ ಮೇಲೆ ಅಥವಾ ಪಾಳು ಬಿದ್ದ ಕಟ್ಟಡಗಳ ಮೇಲೆ ನಿದ್ರಿಸುತ್ತದೆ. ರಾತ್ರಿ ಹೊತ್ತಿನಲ್ಲಿಯೇ ಅದರ ಚಲನವಲನ ಹೆಚ್ಚು. ಹೀಗಾಗಿ, ವಿಮಾನ ನಿಲ್ದಾಣದ ಪರಿಸರದಲ್ಲಿ 5 ಮತ್ತು ಗಾಮನಗಟ್ಟಿ ಹೊರವಲಯದಲ್ಲಿ 10 ಕ್ಯಾಮರಾ ಟ್ರಾ್ಯಪ್​ಗಳನ್ನು ಗುರುವಾರವೇ ಅಳವಡಿಸಲಾಗಿದೆ.
ಆದರೂ, ಗುರುವಾರ ರಾತ್ರಿ ಚಿರತೆಯ ಯಾವುದೇ ರೀತಿಯ ಚಲನವಲನ ಕ್ಯಾಮರಾಗಳಲ್ಲಿ ಕಂಡುಬಂದಿಲ್ಲ.
ವಿಮಾನ ನಿಲ್ದಾಣದ ಸಿಬ್ಬಂದಿ ಕಳೆದ ಮಂಗಳವಾರ ಸಂಜೆ ಎಂದಿನಂತೆ ಪರಿಶೀಲನೆಗೆ ತೆರಳಿದ್ದಾಗ ನಿಲ್ದಾಣದ ಕಂಪೌಂಡ್ ಬಳಿ ಚಿರತೆ ಇರುವುದು ಪತ್ತೆಯಾಗಿತ್ತು.
ಇದೀಗ, ಮುಂಜಾಗೃತಾ ಕ್ರಮವಾಗಿ ಗೋಕುಲ, ಜಗದೀಶ ನಗರ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರವನ್ನು ನಿಷೇಧಿಸಲಾಗಿದೆ.