108 ಆರೋಗ್ಯ ಕವಚ' ಆಂಬುಲೆನ್ಸ್.
ಧಾರವಾಡ: ಖಾಸಗಿ ಹೊರಗುತ್ತಿಗೆ ಏಜೆನ್ಸಿ ಮೂಲಕ ನಿರ್ವಹಣೆಯಾಗುತ್ತಿದ್ದ `108 ಆರೋಗ್ಯ ಕವಚ' ತುರ್ತು ಆಂಬುಲೆನ್ಸ್ ಸೇವೆ'ಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಿ, ಸೇವೆಯನ್ನು ಪರಿಷ್ಕರಿಸುವುದಕ್ಕೆ ಸರ್ಕಾರ ಮುಂದಾಗಿದೆ. ಈ ಸಂಬಂಧ ಸಿದ್ಧತೆಗಳು ನಡೆದಿವೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ 108 ತುರ್ತು ಸೇವೆಗಳ ಕಾರ್ಯಾಚರಣೆಯನ್ನು ಇಲಾಖೆಯು ಪ್ರಾಯೋಗಿಕವಾಗಿ ಆರಂಭಿಸಿ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ತಯ್ಯಾರಿ ನಡೆಸಿದೆ. ಏಜೆನ್ಸಿಯ ತುರ್ತು ಪ್ರತಿಕ್ರಿಯೆ ತಂಡ ಮತ್ತು ಅದರ ವ್ಯವಸ್ಥಾಪಕರನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಇಲಾಖೆಯಡಿ ಸಿಬ್ಬಂದಿ ಸೇವೆ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಸಿಬ್ಬಂದಿ ಕೊರತೆ ನೀಗಿಸಲು ಶೀಘ್ರ ಕ್ರಮ ವಹಿಸಲಾಗುವುದು. ಸ್ಥಳೀಯವಾಗಿ ಸಿಬ್ಬಂದಿ ನೇಮಿಸಿಕೊಳ್ಳಲೂ ಸರ್ಕಾರ ಅನುಮತಿ ನೀಡಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
`108 ಆರೋಗ್ಯ ಕವಚ' ಕರ್ನಾಟಕದಲ್ಲಿ ಉಚಿತ ಮತ್ತು 24/7 ತುರ್ತು ಆಂಬುಲೆನ್ಸ್ ಸೇವೆಯಾಗಿದೆ. ಸಮಗ್ರ ವೈದ್ಯಕೀಯ ಅಲ್ಲದೆ ಪೊಲೀಸ್ ಮತ್ತು ಅಗ್ನಿಶಾಮಕ ಸಹಾಯವನ್ನು ಒದಗಿಸುತ್ತದೆ. ಇದರ ದಕ್ಷತೆ ಸುಧಾರಿಸಲು ಖಾಸಗಿ ಸಂಸ್ಥೆಗಳಿಂದ ಈ ಕಾರ್ಯಾಚರಣೆಗಳ ಸಂಪೂರ್ಣ ನಿಯಂತ್ರಣವನ್ನು ಇಲಾಖೆ ತೆಗೆದುಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕೇಂದ್ರೀಕೃತ ಕಮಾಂಡ್ ಸೆಂಟರ್ ಹೊಂದಲಿದೆ.
ಜಿಲ್ಲಾ ಮಟ್ಟದಲ್ಲೂ ನಿಯಂತ್ರಣ:
ಜಿಲ್ಲಾಮಟ್ಟದಲ್ಲೂ ಕಮಾಂಡ್ ಸೆಂಟರ್‌ಗಳನ್ನು ಅನುಷ್ಠಾನಗೊಳಿಸಿ, ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಲು ಆರೋಗ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆಸ್ಪತ್ರೆಗಳಿಗೆ ಸಾಗಿಸುವಾಗ ತುರ್ತು ವೈದ್ಯಕೀಯ ತಂತ್ರಜ್ಞರ (ಇಎಂಟಿ) ಮೂಲಕ ಪೂರ್ವಆಸ್ಪತ್ರೆ ಆರೈಕೆ ಕಲ್ಪಿಸುವ ಸೇವೆಯನ್ನು ಉತ್ತಮಗೊಳಿಸಲು ರೂಪುರೇಷೆಗಳನ್ನು ಇಲಾಖೆ ಹಾಕಿಕೊಂಡಿದೆ.
ರಾಜ್ಯದಲ್ಲಿ 700 ಆಂಬುಲೆನ್ಸ್ ಗಳಲ್ಲಿ ಸುಮಾರು 530 ಮಾತ್ರ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮುಂದಿನ ಮೂರು ತಿಂಗಳೊಳಗೆ `108 ಆರೋಗ್ಯ ಕವಚ' ತುರ್ತು ಆಂಬುಲೆನ್ಸ್ ಸೇವೆ'ಯನ್ನು ಇಲಾಖೆಯು ತನ್ನ ಸುಪರ್ದಿಗೆ ಪಡೆಯಲಿದೆ. ಆಂಬುಲೆನ್ಸ್ ಚಾಲಕ ಮತ್ತು ಇಎಂಟಿ ಸಿಬ್ಬಂದಿ ಕೊರತೆಯಿದ್ದು, ಸರ್ಕಾರದ ಗಮನ ಸೆಳೆಯಲಾಗಿದೆ. ಇಲಾಖೆ ವತಿಯಿಂದ ಕಾರ್ಯಾಚರಣೆ ಆರಂಭಿಸುವ ಹೊತ್ತಲ್ಲಿ ಕೊರತೆಯಾಗಿರುವ ಹುದ್ದೆಗಳನ್ನು ಭರ್ತಿಗೊಳಿಸುವ ಭರವಸೆ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 22 ಆಂಬುಲೆನ್ಸ್:
`108 ಆರೋಗ್ಯ ಕವಚ' ತುರ್ತು ಆಂಬುಲೆನ್ಸ್ ಸೇವೆ'ಯನ್ನು ಖಾಸಗಿ ಏಜೆನ್ಸಿಯ ಬದಲಾಗಿ ಇಲಾಖೆಗೆ ವಹಿಸುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಸಿಬ್ಬಂದಿ ನೇಮಕ ಕುರಿಂತೆ ಸರ್ಕಾರದ ಮಟ್ಟದಲ್ಲಿ ಚೆರ್ಚೆ ನಡೆದಿದೆ.