ಮೈಸೂರು: ಶ್ರೀಮಹರ್ಷಿ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟ ಭೂಮಿಯನ್ನು ಖಾಸಗಿ ಸಂಸ್ಥೆಯವರಿಗೆ ಮಂಜೂರು ಮಾಡಿರುವ ಶಿಫಾರಸನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿ ಕರ್ನಾಟಕ ವೀರಕೇಸರಿ ಪಡೆಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ತಾಲೂಕಿನ ಕಸಬಾ ಹೋಬಳಿಯ ಸರ್ವೇ ನಂ.92ರಲ್ಲಿ ಖಾಲಿ ಇದ್ದ ಸರ್ಕಾರಿ ಜಾಗವನ್ನು ವಾಲ್ಮೀಕಿ ಭವನಕ್ಕೆ ಕಾಯ್ದಿರಿಸಲು ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟ ಜಾಗವನ್ನು ಖಾಸಗಿ ಸಂಸ್ಥೆಗೆ ಮಂಜೂರು ಮಾಡಲು ಉಪವಿಭಾಗಾಧಿಕಾರಿಗೆ ಶಿಫಾರಸು ಮಾಡಿದ್ದಾರೆ ಎಂದು ದೂರಿದರು.
ನ್ಯಾಯ, ನೀತಿ, ಧರ್ಮ ಮನಗಾಣದೆ ಬಲಾಢ್ಯರ ಒತ್ತಡಕ್ಕೆ ಮಣಿದು ಶೋಷಿತ, ಹಿಂದುಳಿದ ಸಮುದಾಯಕ್ಕೆ ಜಿಲ್ಲಾಧಿಕಾರಿ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಹಗರಣ ಮತ್ತು ಇಂತಹ ಭ್ರಷ್ಟ ಅಧಿಕಾರಿಗಳ ಮೂಲಕ ಪರಿಶಿಷ್ಟರನ್ನು ದಮನ ಮಾಡುತ್ತಿದೆ. ಕೂಡಲೇ ಖಾಸಗಿ ಸಂಸ್ಥೆಗೆ ಸರ್ಕಾರ ಜಾಗ ನೀಡಲು ಮಾಡಿರುವ ಶಿಫಾರಸು ವಾಪಸ್ ಪಡೆಯಬೇಕು. ವಾಕ್ಮೀಕಿ ನಿಗಮದ ಭ್ರಷ್ಟಾಚಾರ ತಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ವೀರ ಕೇಸರಿ ಪಡೆ ದ್ಯಾವಪ್ಪ ನಾಯಕ, ಹುಣಸೂರು ಪ್ರಭಾಕರ್, ಕಡಕೊಳ ಕುಮಾರಸ್ವಾಮಿ, ಬದನಗುಪ್ಪೆ ನಾರಾಯಣ್, ವಿನೋದ್, ನಾಗವಾಲ ತಿಮ್ಮನಾಯಕ, ಸತೀಶ್‌ಬಾಬು, ರಂಗಸ್ವಾಮಿ, ಸಂತೋಷ್, ದುಂಡಯ್ಯ ಗುಂಡ್ಲುಪೇಟೆ, ಮದುಚನ ಚಂದ್ರು, ಸುರೇಶ್, ರಂಗಸ್ವಾಮಿ ಇತರರು ಇದ್ದರು.