ಮಲೇಬೆನ್ನೂರು: ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂಬರ್ 3ನೇ ವಿಭಾಗದ ವ್ಯಾಪ್ತಿಯ ಹೊರಗುತ್ತಿಗೆ ನೌಕರರ 6 ತಿಂಗಳ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಮಂಗಳವಾರ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸಿದರು.
ಈ ಸಂದರ್ಭ ಮುಖಂಡರು ಮಾತನಾಡಿ, ಕಳೆದ 6 ತಿಂಗಳಿಂದ ನೌಕರರಿಗೆ ವೇತನ ನೀಡಿಲ್ಲ. ಇದರಿಂದ ನಾವು ಬದುಕು ನಡೆಸುವುದು ಕಷ್ಟವಾಗಿದೆ. ಈ ಕುರಿತು ಅನೇಕ ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಈ ಕೂಡಲೇ ಬಾಕಿ ವೇತನ ಪಾವತಿಸಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಮಲೆಬೆನ್ನೂರು ನೀರಾವರಿ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ, ಉಪಾಧ್ಯಕ್ಷ ಶಿವಣ್ಣ, ನಾರೇಶಪ್ಪ, ಆಂಜನಪ್ಪ, ರೋಷನ್, ಸಿದ್ದನಗೌಡ ಸಿರಿಗೆರೆ, ಎಂ.ಎಂ. ಮಹೇಶ್ವರಪ್ಪ, ಶಿವರಾಜ್, ರೇವಣಪ್ಪ, ಯಶವಂತ್, ರೇವಣಪ್ಪ ಮತ್ತಿತರರಿದ್ದರು.