ಚಾಮರಾಜನಗರ: ಕೊಳ್ಳೇಗಾಲದ ಪಾಲರ್ ಹಾಡಿ ಗ್ರಾಮದ ಮನೆಗಳಿಗೆ ವಿದ್ಯುತ್ ಕಲ್ಪಿಸಲು ಆಗ್ರಹಿಸಿ ಅರಣ್ಯವಾಸಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಪಾಲರ್ ಗ್ರಾಮಸ್ಥರು ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಅರಣ್ಯವಾಸಿ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ನಾಗೇಂದ್ರ ಮಾತನಾಡಿ, ಪಾಲರ್ ಗ್ರಾಮ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮೌಲಸೌಕರ್ಯ ವಂಚಿತರಾಗಿ ಜನ ಬದುಕುತ್ತಿದ್ದಾರೆ. ಸೆಸ್ಕ್ ಹಾಗೂ ಅರಣ್ಯ ಇಲಾಖೆ ಅಸಡ್ಡೆ ಧೋರಣೆ ಅನುಸರಿಸಿ ಆದಿವಾಸಿ ಜನರನ್ನು ಸಮಾಜದ ಹೊರಗಿಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ವೇಳೆ ಅರಣ್ಯ ಇಲಾಖೆಯ ಎಸಿಎಫ್ ಶಶಿಧರ್ ಹಾಗೂ ಆರ್.ಎಫ್.ಒ ಭರತ್ ಮತ್ತು ಸೆಸ್ಕ್ ಎಇಇ ರಾಜು ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಸೆಸ್ಕ್ ಕಡೆಯಿಂದ ವಿದ್ಯುತ್ ನೀಡಲು ಅಗತ್ಯವಿರುವ ಎಲ್ಲ ತಯಾರಿ ಮಾಡಲಾಗುತ್ತಿದೆ. ಇನ್ನೊಂದು ತಿಂಗಳು ಕಾಲಾವಕಾಶ ಕೊಟ್ಟರೆ ಪಾಲರ್‌ಗೆ ವಿದ್ಯುತ್ ಸಂಪರ್ಕ ಕೊಡಿಸುತ್ತೇವೆ ಎಂದರು.
ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕೊಡಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಈ ಕ್ಷಣದಲ್ಲೆ ವಾಹನ ಮೂಲಕ ರವಾನಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಕೈಬಿಟ್ಟರು.
ರಾಮನಗರ ಕಾನೂನು ಸೇವೆಗಳ ಪ್ರಾಧಿಕಾರ ಸ್ವಸೇವಕ ಪ್ರಜ್ವಲ್, ಪ್ರವೀಣ್, ಎಸ್‌ಡಿಪಿಐ ಟೌನ್ ಅಧ್ಯಕ್ಷ ಜಾಕೀರ್ ಪಾಷ, ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಕಲೀಲ್, ಪಾಲರ್ ಗ್ರಾ.ಪಂ. ಸದಸ್ಯರಾದ ಕೆಂಪ, ಮಾದೇವಿ, ಪಾಲರ್ ಗ್ರಾಮಸ್ಥರಾದ ಮಹದೇವ, ಸಿದ್ದಮರಿ, ಕೆಂಪಮ್ಮ, ಲಕ್ಷ್ಮೀ, ಈರಮ್ಮ ಮತ್ತಿತರಿದ್ದರು.