ಗುಂಡ್ಲುಪೇಟೆ: ಜನರನ್ನು ದುಶ್ಚಟಗಳಿಂದ ಹೊರತಂದು ಸ್ವಸ್ಥ ಸಮಾಜ ನಿರ್ಮಾಣ, ಗ್ರಾಮೀಣ ಅಭಿವೃದ್ಧಿ ಹಾಗೂ ಮಹಿಳಾ ಸ್ವಾವಲಂಬನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲವಾಗಿರುವ ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಗಳ ಅಬಿವೃದ್ಧಿ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಗುಂಪುಗಳಾಗಿ ಮಾಡಿ ಅವರಿಗೆ ವಿವಿಧ ಮೌಲ್ಯವರ್ಧಿತ ಕೌಶಲ ತರಬೇತಿಗಳನ್ನು ನೀಡಿ ಬ್ಯಾಂಕ್‌ಗಳ ಮೂಲಕ ಅರ್ಥಿಕ ಸಹಾಯ ಕೊಡಿಸುವ ಮೂಲಕ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ ಎಂದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ದುಶ್ಚಟಗಳನ್ನು ದೂರಮಾಡಿ ಸುಂದರ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಗಾಂಧಿಸ್ಮತಿ, ಜಾಗೃತಿ ಜಾಥಾ ಆಚರಣೆ ಅರ್ಥಪೂರ್ಣವಾದದ್ದು. ಧರ್ಮಸ್ಥಳ ಸಂಘ ಮಹಿಳೆಯರಿಗೆ ಒಂದು ಶಕ್ತಿ ನೀಡಿದೆ. ಮಹಿಳೆಯರ ಸಬಲೀಕರಣ, ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ನಾಲ್ಕು ಸಾವಿರ ಸಂಘಗಳಿವೆ ಎಂದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಕ್ತಿ ತಿಳಿಯುತ್ತದೆ. ಜಿಲ್ಲೆಯಲ್ಲಿ ಇಪ್ಪತ್ತಾರು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದಾರೆ, ಕುಡಿತ ಬಿಡಲು ಸಾಧ್ಯವೆ ಇಲ್ಲ ಎನ್ನುವವರನ್ನು ಮದ್ಯವರ್ಜನ ಶಿಬಿರಗಳ ಮೂಲಕ ಮನಃಪರಿವರ್ತನೆ ಮಾಡುತ್ತ ಅವರ ಕುಟುಂಬಕ್ಕೂ ಹೊಸ ಭರವಸೆ ನಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮೂಡಗೂರು ವಿರಕ್ತ ಮಠದ ಶ್ರೀಇಮ್ಮಡಿ ಉದ್ದಾನ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮ ಎಂದರೆ ಅದು ಸದ್ಭಕ್ತರ ಕಾರ್ಯಕ್ರಮವಾಗಿದೆ. ಗಾಂಧೀಜಿ ಅವರು ದೇಶ ಅಭಿವೃದ್ಧಿಯಾಗಬೇಕಾದರೆ ಗ್ರಾಮೀಣ ಭಾಗದ ಜನರು ವ್ಯಸನಮುಕ್ತರಾಗಬೇಕು ಎಂದಿದ್ದರು. ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಜನರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಮಹಿಳೆಯರ ಏಳಿಗೆಗೆ ಮತ್ತು ದೇವಸ್ಥಾನಗಳ ಪುನರುಜ್ಜೀವನಕ್ಕೆ ಹಾಗೂ ಜಲಚರ ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಶಶಿಧರ್(ದೀಪು), ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ರವಿಶಂಕರ್ ಇತರರು ಇದ್ದರು.