ಜಿಲ್ಲೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿಕರು, ಮಹಿಳೆಯರಿಗೆ ವರದಾನ

ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಮೂಲ ಸ್ವರೂಪವನ್ನು ಬಿಟ್ಟು ಕೊಡದೇ ಕಾಲಕ್ಕೆ ತಕ್ಕಂತೆ ತನ್ನ ಕರ್ತವ್ಯ ಗಳನ್ನು ಸುಧಾರಿಸಿಕೊಳ್ಳುತ್ತ ಮುನ್ನಡೆಯುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಅನಿಲ್ ಕುಮಾರ್ ಹೇಳಿದರು.

ನಗರದ ವೈಷ್ಣವಿ ಕನ್ವೆನ್ಸನ್ ಹಾಲ್‌ನಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಸಿಬ್ಬಂದಿಗೆ ಯಶಸ್ವಿ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರ ಕಾರ್ಯಚಟುವಟಿಕೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾ ಡಿ, ಯೋಜನೆಯು ಕೃಷಿಕರಿಗೆ, ಮಹಿಳೆಯರಿಗೆ, ಯುವಕ ಯುವತಿಯರಿಗೆ, ದುಶ್ಚಟಗಳಿಂದ ಬಳಲುತ್ತಿರುವ ಜನರಿಗೆ, ಅನಾರೋಗ್ಯ ಪೀಡಿತರಿಗೆ, ದುಡಿಯುವ ಸಾಮಾರ್ಥವಿಲ್ಲದವರಿಗೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ಸೌಲಭ್ಯಗಳನ್ನು ನೀಡುವ ಆಗರವಾಗಿದೆ ಎಂದರು.

ಯೋಜನೆಯು ನಡೆದ ಬಂದ ದಾರಿಯ ಬಗ್ಗೆ ಕಾರ್ಯಕರ್ತರು ಅವಲೋಕನವನ್ನು ಮಾಡಿಕೊಂಡು ಮುಂದೆ ನಾವು ಸಾಗಬೇಕಾದ ದಾರಿಯ ಬಗ್ಗೆ ಚಿಂತನೆ ಮಾಡಬೇಕು, ಮಾಡುವ ಕೆಲಸದೊಂದಿಗೆ ನಮ್ಮ ಜೀವನವನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲೂ ಚಿಂತಿಸಬೇಕು, ನಮ್ಮ ಬದುಕನ್ನು ಪ್ರೀತಿಸುವಂತೆ ನಾವು ಮಾಡುವ ವೃತ್ತಿಯನ್ನು ಸಹ ಗೌರವಿಸಬೇಕು ಎಂದರು.

ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆಯನ್ನು ನೀಡುವ ಮೇಲ್ವಿಚಾರಕರು ಗ್ರಾಮಗಳನ್ನು ಅಭಿವೃದ್ಧಿ ಮಾಡುವ ಚಿಂತಕರು ಎಂದು ನಾವು ಭಾವಿಸಿಕೊಂಡು ಕೆಲಸವನ್ನು ಮಾಡಿದಾಗ ಗ್ರಾಮಗಳ ಸಮಗ್ರ ಅಭಿವೃದ್ಧಿಯೊಂದಿಗೆ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಚಿಂತನೆಗಳನ್ನು ಮತ್ತು ಆಶಯಗಳನ್ನು ಗ್ರಾಮಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಿಸಲು ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಮಾತನಾಡಿ, ಗ್ರಾಮ ಮಟ್ಟದಲ್ಲಿ ಸೇವೆ ಮಾಡುವ ಅಭಿಲಾಷೆಯೊಂದಿಗೆ ಸೇವೆ ಮಾಡುತ್ತಿರುವ ಸೇವಾಪ್ರತಿನಿಧಿಗಳಿಗೆ ಸರಿಯಾದ ತಿಳುವಳಿಕೆ ನೀಡಿ ಅವರನ್ನು ಪ್ರಬುದ್ಧರನ್ನಾಗಿ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಹಾಗೂ ಅವಕಾಶಗಳನ್ನಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹಾರ ಮಾಡುವ ಸೈನಿಕರಂತೆ ಸಜ್ಜುಗೊಳಿಸಬೇಕು. ಸ್ವಸಹಾಯ ಸಂಘಗಳ ಸದಸ್ಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿವರ್ತನೆಯ ಜತೆಗೆ ಸಮುದಾಯದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಪ್ರಮುಖರಾದ ಮಮತಾ ಹರೀಶ್ ರಾವ್, ಎಚ್.ಎಲ್. ಮುರಳೀಧರ್, ಜಯಕರ ಶೆಟ್ಟಿ, ಕೇಶವ ದೇವಾಂಗ, ಎಂ. ಚೇತನಾ, ಲತಾ ಬಂಗೇರ, ಕೆ.ಚಿದಾನಂದ ಹಾಗೂ ಇತರರು ಇದ್ದರು.