ಮೈಸೂರು: ಇಡೀ ದೇಶದಲ್ಲೇ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಕಿರು ಪಾಲಿಸಿಗಳನ್ನು ತಲುಪಿಸಿದ ಕೀರ್ತಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಪ್ರಾದೇಶಿಕ ಪ್ರಬಂಧಕ ಡಿ.ವಿಶ್ವೇಶ್ವರ ರಾವ್ ತಿಳಿಸಿದರು.
ನಗದ ಕಳಸ್ತವಾಡಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿಗೆ ಶನಿವಾರ ಭೇಟಿ ನೀಡಿ ಮಾತನಾಡಿ, ಕಿರು ವಿಮಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವುದಕ್ಕೆ ಹರ್ಷವ್ಯಕ್ತಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಿವಿಧ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣ, ಪ್ರಗತಿನಿಧಿ ವಿತರಣೆ, ವಿಮಾ ಕಾರ್ಯಕ್ರಮ, ಸ್ವಉದ್ಯೋಗ, ಸಮುದಾಯ ಅಭಿವೃದ್ಧಿ, ವಾತ್ಸಲ್ಯ ಕಾರ್ಯಕ್ರಮ, ಕೃಷಿ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ ಆರೋಗ್ಯ ರಕ್ಷಾ ವಿಮೆ, ಪ್ರಗತಿ ರಕ್ಷಾ ವಿಮಾ ಕಾರ್ಯಕ್ರಮ, ಗ್ರಾಮ ನೈರ್ಮಲ್ಯ, ಮಾಶಾಸನ, ಸ್ವಗೃಹ ಯೋಜನೆ, ನಮ್ಮೂರು ನಮ್ಮ ಕೆರೆ, ಶಾಲೆಗಳಿಗೆ ಪೀಟೋಪಕರಣ ವಿತರಣೆ, ಸುಜ್ಞಾನನಿಧಿ ಶಿಷ್ಯ ವೇತನ, ಗೋಶಾಲೆ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಹಿರಿಯ ವಿಭಾಗೀಯ ಪ್ರಬಂಧಕ ಸತ್ಯನಾರಾಯಣಶಾಸ್ತ್ರಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಪಾಲಿಸಿ ನೋಂದಣಿಯಾಗಿದ್ದು, ಇದುವರೆಗೆ 47,000 ಮೈಕ್ರೋ ಪಾಲಿಸಿ ನೋಂದಣಿಯಾಗಿವೆ. ಈ ಪಾಲಿಸಿಯಲ್ಲಿ ಸಂಪೂರ್ಣ ಅಂಗವೈಕಲ್ಯ ಸೌಲಭ್ಯ, ಮರಣ ಸಾಂತ್ವನದೊಂದಿಗೆ ಅಪಘಾತ ವಿಮಾ ಸೌಲಭ್ಯ ಅಲ್ಲದೆ ಲ್ಯಾಪ್ಸ್ೃ ಆದ ಪಾಲಿಸಿಗಳನ್ನು 2 ವರ್ಷಗಳ ಒಳಗೆ ಪುನರುಜ್ಜೀವನ ಮಾಡುವ ಸೌಲಭ್ಯವಿದ್ದು, ಈ ವಿಮೆ ಸ್ವಸಹಾಯ ಸಂಘದ ಸದಸ್ಯರಿಗೆ ಉಪಯುಕ್ತವಾದ ವಿಮೆಯಾಗಿದೆ ಎಂದರು.
ಮಹಿಳೆಯರಿಗೆ ಜೀವನ ನಿರ್ವಹಣೆ ಹಾಗೂ ಕುಟುಂಬದ ಭದ್ರತೆಗಾಗಿ ಜೀವ ವಿಮೆ ಹಾಗೂ ಉಳಿತಾಯ ಯೋಜನೆಗಳು ಸಹಕಾರಿ ಎಂದು ಹೇಳಿದರು.
ಯೋಜನೆಯ ಮೈಸೂರು ಜಿಲ್ಲೆ ಹಿರಿಯ ನಿರ್ದೇಶಕ ವಿ.ವಿಜಯ್ಕುಮಾರ್ ನಾಗನಾಳ, ಭಾರತೀಯ ಜೀವ ವಿಮಾ ನಿಗಮದ ಪ್ರಬಂಧಕ ಕಾಂತರಾಜಪ್ಪ, ಎಂಐಎಸ್ ಯೋಜನಾಧಿಕಾರಿ ಬಿ.ಮಾಧವ, ವಿಮಾ ಸಮನ್ವಯಾಧಿಕಾರಿ ಎಸ್.ಅಭಿಷೇಕ್ ಇತರರು ಇದ್ದರು.