ಜಯಪುರ: ಮಹಾತ್ಮ ಗಾಂಧಿ ಚಿಂತನೆ ಹಾಗೂ ಆದರ್ಶದ ಮೇಲ್ಪಂಕ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ. ಗಾಂಧಿ ವಿಶ್ವದ ಕೋಟ್ಯಂತರ ಜನರಲ್ಲಿ ಪರಿವರ್ತನೆ ತಂದಿರುವಾಗ, ಸಾವಿರಾರು ಸದಸ್ಯರನ್ನು ಹೊಂದಿರುವ ಸಂಸ್ಥೆ ಸದಸ್ಯರಾದ ನಾವು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಹೇಳಿದರು.
ಭಾನುವಾರ ಹೇರೂರು ಗ್ರಾಪಂ ಕುಂದೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಆಯೋಜಿಸಿದ್ದ ಗಾಂಧಿ ಸ್ಮರಣೆ ಮತ್ತು ದುಶ್ಚ್ಚಟಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಿ ತನ್ನದೇ ವ್ಯಕ್ತಿತ್ವದ ಮೂಲಕ ಮಹಾತ್ಮರಾದರು. ದುಶ್ಚಟಗಳಿಂದ ಮುಕ್ತರಾಗಿ ಎನ್ನುತ್ತಿದ್ದರು. ವಿಪರ್ಯಾಸವೆಂದರೆ ಯುವಕರು ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿರುವುದರ ಪರಿಣಾಮ ಆಸ್ಪತ್ರೆಗಳು ರೋಗಿಗಳಿಂದ, ಜೈಲುಗಳು ಅಪರಾಧಿಗಳಿಂದ ತುಂಬಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಗಾಂಧಿ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 1800 ಮದ್ಯ ವ್ಯರ್ಜನ ಶಿಬಿರಗಳನ್ನು ನಡೆಸಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ವ್ಯಸನಮುಕ್ತರಾಗಿಸಿದೆ. ಸ್ವದೇಶಿ ವಸ್ತುಗಳ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಸಿರಿ ಬ್ರಾಂಡ್‌ನಡಿ ಸ್ವದೇಶಿ ಉತ್ಪನ್ನಗಳ ಉತ್ಪ್ಪಾದನೆ ಮಾಡುತ್ತಿದೆ. 1 ಸಾವಿರ ಶೌರ್ಯ ವಿಪತ್ತು ತಂಡಗಳನ್ನು ರಚಿಸಿ ಪ್ರವಾಹ ಸೇರಿದಂತೆ ಇತರ ತುರ್ತು ಸಂದರ್ಭದಲ್ಲಿ ಜನರ ಸಹಾಯಕ್ಕೆ ನೆರವಾಗುತ್ತಿದೆ. ಆ ಮೂಲಕ ಪರೋಪಕಾರದ ಗಾಂಧಿ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ತಿಳಿಸಿದರು.
ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಅರವಿಂದ ಸೋಮಯಾಜಿ ಮಾತನಾಡಿ, ಬಾಲ್ಯದ ದಿನಗಳಲ್ಲಿ ತಾಯಿಯೊಂದಿಗೆ ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಗಾಂಧಿ ಜೀವನ ಪೂರ್ತಿ ಸತ್ಯವಂತರಾದರು. ಆದರೆ ದಿನವೂ ಟಿವಿಗಳಲ್ಲಿ ಬರುವ, ಅಕ್ಕಪಕ್ಕದಲ್ಲಿ ನಡೆಯುವ ಕೊಲೆ, ಸುಲಿಗೆ, ಅತ್ಯಾಚಾರಗಳನ್ನು ನೋಡುವ ನಮ್ಮ ಮಕ್ಕಳು ಏನಾಗಬಹುದು ಊಹಿಸಿ. ಸಮಾಜವನ್ನು ಸರಿಪಡಿಸುವ ಜತೆಗೆ ನಾವು ಸರಿಯಾಗ ಬೇಕು ಎಂದರು.
ಸರ್ಕಾರ ಎಷ್ಟೇ ಮದ್ಯದ ಅಂಗಡಿ ತೆರೆದರೂ ಅಲ್ಲಿ ವ್ಯಾಪಾರ ನಡೆಯದೆ ನಷ್ಟವಾಗಿ ಮದ್ಯದಂಗಡಿ ಮುಚ್ಚುವಂಥ ಗಟ್ಟಿ ನಿರ್ಧಾರ ಸಮಾಜ ಮಾಡಬೇಕು. ನಥೋರಾಮ್ ಗೋಡ್ಸೆ ಗಾಂಧಿ ಅವರನ್ನು ಕೊಂದರೆ ನಾವು ಅವರ ಆದರ್ಶಗಳನ್ನು ನಿತ್ಯ ಕೊಲ್ಲುತ್ತಿದ್ದೇವೆ. ಗಾಂಧಿ ಆದರ್ಶ ಮನೆ ಮನಗಳಲ್ಲಿ ಬೆಳಗಬೇಕು ಎಂದರು.
ಹೇರೂರು ಗ್ರಾಪಂ ಅಧ್ಯಕ್ಷೆ ಶೋಭಾ, ಕೃಷಿಕ ರಾಘವೇಂದ್ರ ಗುರುಪ್ರಸಾದ್ ಹೆಬ್ಬಾರ್, ಬಾಲಕೃಷ್ಣ ಭಟ್, ರಾಘವೇಂದ್ರ ಭಟ್, ಯೋಜನಾಧಿಕಾರಿ ಮೂರ್ತಿ ಶೆಟ್ಟಿ, ಮೇಲ್ವಿಚಾರಕ ಮೋಹನ್, ಸೇವಾಪ್ರತಿನಿಧಿ ಸಾವಿತ್ರಿ, ಶೌರ್ಯ ವಿಪತ್ತು ತಂಡದ ಸಚಿನ್ ತೆಂಗಿನಮನೆ, ಸದಸ್ಯರಿದ್ದರು.