ಮಂಡ್ಯ: ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲಿ ಸಂಚಾರ ಆರೋಗ್ಯ ತಪಾಸಣೆ ಮಾಡಿಸುವ ಜತೆಗೆ ಅಗತ್ಯವಿದ್ದವರನ್ನು ಒಂಡೆಡೆ ಸೇರಿಸಿ ನುರಿತ ವೈದ್ಯರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದು ಶಂಭು ಸೇವಾ ಟ್ರಸ್ಟ್ ಹಾಗೂ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಪಣಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶಂಭು ಸೇವಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಹಾಗೂ ಗ್ರಾಮದಿಂದ ಎರಡು ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಹೊರಟ ಶಂಭು ಧರ್ಮಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜನಪರವಾಗಿ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ. ಅವರು ಪಣಕನಹಳ್ಳಿ ಗ್ರಾಮದ ಜನರು ತೋರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಹಣ, ಅಂತಸ್ತು ಗಳಿಸುವುದಕ್ಕಿಂತ ಜನರ ಪ್ರೀತಿ ಗಳಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹುಟ್ಟಿದ ಊರನ್ನು ಮರೆಯದೇ ಅಭಿವೃದ್ಧಿ ಕೆಲಸಕ್ಕೆ ಮುಂದಾಗಬೇಕು. ಶಾಲೆಗಳು ದೇವಸ್ಥಾನ ಇದ್ದಂತೆ. ಮಕ್ಕಳು ದೇವರು ಸಮಾನ. ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ 1ನೇ ತರಗತಿಯಿಂದ 10 ರವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್‌ಗಳನ್ನು ವಿತರಣೆ ಮಾಡುತ್ತಿದ್ದೇನೆ. ಇನ್ನು ಈಗಾಗಲೇ ಮಂಡ್ಯ ತಾಲೂಕಿನಾದ್ಯಂತ ಶಂಭು ಧರ್ಮ ಯಾತ್ರೆ ಮಾಡಿಸಲಾಗುತ್ತಿದೆ. ಎಲ್ಲರೂ ಗುಂಪಾಗಿ ಯಾತ್ರೆ ಮಾಡಿಸುವುದರಿಂದ ಸಂತೋಷವಾಗುತ್ತದೆ. ಯಾರು ಆತುರ ಮಾಡುವುದು ಬೇಡ. ಎಲ್ಲರಿಗೂ ಧರ್ಮ ದರ್ಶನ ಮಾಡಿಸಲಾಗುವುದು ಎಂದರು.
ಗ್ರಾಮದ ಹಿರಿಯ ಮುಖಂಡ ಬೊಮ್ಮೇಗೌಡ, ಗ್ರಾಪಂ ಸದಸ್ಯರಾದ ಆನಂದ್, ನಂದಿನಿ, ಮಾಜಿ ಅಧ್ಯಕ್ಷ ಉಮೇಶ್, ಮಾಜಿ ಸದಸ್ಯ ಶಂಕರ್, ಮುಖಂಡರಾದ ಪ್ರದೀಪ್, ಕ್ಯಾತೇಗೌಡ, ಟ್ರಸ್ಟ್‌ನ ಕಾರ್ಯದರ್ಶಿ ಬಿ.ಆರ್.ಸುರೇಶ್ ಇತರರಿದ್ದರು.