ಹಿರೀಸಾವೆ ಹೋಬಳಿಯ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಗುರು ಕಳಸ ಪ್ರತಿಷ್ಠಾಪನೆಯೊಂದಿಗೆ ಧನುರ್ಮಾಸ ಪೂಜೆಗೆ ಶ್ರೀ ಶಂಭುನಾಥ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಿವನಂಜೇಗೌಡ, ಬೋರೇಗೌಡ, ಪ್ರಕಾಶ್ ಇದ್ದರು. 17 ಹಿರೀಸಾವೆ 02: ಶ್ರೀ ಶಂಭುನಾಥಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾಮಠ. 
ಜಿಲ್ಲೆ

ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸ ಪೂಜೆ

ಹಿರೀಸಾವೆ: ಹೋಬಳಿಯ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಗುರುಕಳಸ ಪ್ರತಿಷ್ಠಾಪನೆ ಮಾಡುವ ಮೂಲಕ ಧನುರ್ಮಾಸ ಪೂಜಾ ಕಾರ್ಯಕ್ರಮಕ್ಕೆ ಶನಿವಾರ ರಾತ್ರಿ ಚಾಲನೆ ನೀಡಿದರು.

ರಾತ್ರಿ 8.30ಕ್ಕೆ ದೇಗುಲದ ಸಮೀಪದಲ್ಲಿರುವ ಮಜ್ಜನ ಬಾವಿಯ ಬಳಿ ಶ್ರೀ ಬಸವೇಶ್ವರಸ್ವಾಮಿಯ ಗುರುಕಳಸ ಪ್ರತಿಷ್ಠಾಪಿಸಿ ಕೆಂಪು ವಸ್ತ್ರ, ರುದ್ರಾಕ್ಷಿ ಮಾಲೆ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದು, ವಿಘ್ನೇಶ್ವರ ಹಾಗೂ ಗಂಗಾಪೂಜೆ ಬಳಿಕ ಗುರು ಕಳಸೋತ್ಸವ ಆರಂಭಗೊಂಡಿತು.

ಮಂಗಳವಾದ್ಯದೊಂದಿಗೆ ಕಳಸೋತ್ಸವ ಶ್ರೀಕ್ಷೇತ್ರಕ್ಕೆ ಆಗಮಿಸಿ ಮೂರು ಸುತ್ತು ಪ್ರದಕ್ಷಿಣೆ ಬಂದ ಬಳಿಕ ದೇಗುಲದ ಆವರಣದಲ್ಲಿ ಹಸಿರು ಚಪ್ಪರದ ಕೆಳಗೆ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ಮಂಟಪದಲ್ಲಿ ಗುರು ಕಳಸವನ್ನು ಪ್ರತಿಷ್ಠಾಪಿಸಲಾಯಿತು.

ಭಾನುವಾರ ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ಪ್ರಥಮ ಪೂಜೆ ವೇಳೆ ಶ್ರೀ ಶಿವಪುತ್ರನಾಥ ಸ್ವಾಮೀಜಿ ಅವರು 9 ಭಕ್ತರಿಗೆ ಬಸವ ಮಾಲಾಧಾರಣೆ ನೆರವೇರಿಸಿದರು. ಕಬ್ಬಳಿ, ಮೂಕಿಕೆರೆ, ಮಂಡಲೀಕನಹಳ್ಳಿ, ದಿಡಗ, ನರಿಹಳ್ಳಿ, ಪಿ.ಹೊಸಹಳ್ಳಿ-ಪುರ ಹಾಗೂ ಉಳ್ಳಾವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಳಸೋತ್ಸವ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಗುಡಿಗೌಡ ಪ್ರಕಾಶ್, ಪ್ರಮುಖರಾದ ಗಣೇಶ್‌ಗೌಡ, ಕೆಂಪೇಗೌಡ ಹಾಗೂ ಬೋರೇಗೌಡ ಇದ್ದರು.